Jharkhand Assembly Polls 2024: ಬಿಜೆಪಿ ನಾಯಕಿ ಬಗ್ಗೆ ಕಾಂಗ್ರೆಸ್ ಶಾಸಕ ವಿವಾದಾತ್ಮಕ ಹೇಳಿಕೆ
Jharkhand Assembly Election 2024: ಈಗಾಗಲೇ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗಿದೆ. ಇನ್ನು ಇದೀಗ ಎಲ್ಲಾ ಪಕ್ಷಗಳು ನಾಯಕರು ಆರೋಪ-ಪ್ರತ್ಯಾರೋಪಗಳನ್ನು ಮಾಡುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಹಾಗೆಯೇ ಕಾಂಗ್ರೆಸ್ ಶಾಸಕರೊಬ್ಬರು ಬಿಜೆಪಿ ನಾಯಕಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾರ್ಖಂಡ್‌ನಲ್ಲಿ ಇದೀಗ ವಿಧಾನಸಭಾ ಚುನಾವಣಾ ಪ್ರಚಾರದ ಕಾವೇರಿದೆ. ಇದರ ನಡುವೆಯೇ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಅವರು ಬಿಜೆಪಿ ನಾಯಕಿ ಸೀತಾ ಸೊರೇನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕೋಲಾಹಲ ಸೃಷ್ಟಿಸಿದ್ದಾರೆ.

ಸೀತಾ ಸೊರೇನ್ ಹೆಸರನ್ನು ಉಲ್ಲೇಖಿಸದೆ, ಅವಹೇಳನಕಾರಿ ಪದ ಬಳಕೆ ಮಾಡಿದ ಅವರು, 'ತಿರಸ್ಕರಿಸಿದ ಸರಕು' ಎಂದು ಹೇಳಿಕೆ ನೀಡಿದ್ದಾರೆ. ಇನ್ನೂ ಈ ಬಗ್ಗೆ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ನಾಮಪತ್ರ ಸಲ್ಲಿಸಿದ ನಂತರ, ಅನ್ಸಾರಿ ಅವರು ಸೀತಾ ಅವರನ್ನು ಅವಹೇಳನಕಾರಿ ಪದಗಳಲ್ಲಿ ಬೈದಿದ್ದಾರೆ. ಈ ಹೇಳಿಕೆ ವಿರುದ್ಧ ಬಿಜೆಪಿ ನಾಯಕರು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ. ಅನ್ಸಾರಿ ಅವರ ಹೇಳಿಕೆಗಳು ಬುಡಕಟ್ಟು ಮಹಿಳೆಯರ ಗೌರವದ ಬಗ್ಗೆ ಕಳವಳ ಹೆಚ್ಚಿಸುತ್ತವೆ. ಬುಡಕಟ್ಟು ಮಹಿಳೆಯರ ಬಗ್ಗೆ ಇಂಡಿಯಾ ಮೈತ್ರಿಕೂಟದ, ಕಾಂಗ್ರೆಸ್ ಪಕ್ಷದ, ಜೆಎಂಎಂ ಪಕ್ಷದ ನಿಲುವನ್ನು ಪ್ರತಿಧ್ವನಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಕಲ್ಪನಾ ಸೊರೆನ್ ಆಕ್ರೋಶ: ಬಿಜೆಪಿಯ ಪಿತೂರಿ ಭಾಗವಾದ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆಯನ್ನು ನಿಗದಿತ ಸಮಯಯಕ್ಕಿಂತ ಮುಂಚಿತವಾಗಿ ನಡೆಸಲಾಗುತ್ತಿದೆ ಎಂದು ಶಾಸಕಿ, ಮುಖ್ಯಮಂತ್ರಿ ಹೇಮಂತ್ ಸೋರೇನ್ ಪತ್ನಿ ಕಲ್ಪನಾ ಸೊರೆನ್ ಆರೋಪ ಮಾಡಿದರು. ಗಿರಿಧಿಹದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂಸ್ಥೆಗಳ ಮೇಲೆ ಬಿಜೆಪಿಯು ತನ್ನ ಪ್ರಭಾವವನ್ನು ಬಲಪಡಿಸುತ್ತಿದೆ ಎಂದು ಆರೋಪ ಮಾಡುವ ಮೂಲಕ ಆಕ್ರೊಶ ಹೊರಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ನಿಗದಿತ ಸಮಯಕ್ಕೆ ಚುನಾವಣೆ ಘೋಷಣೆಯಾಗಿದೆ. ಆದರೆ, ಜಾರ್ಖಂಡ್‌ನಲ್ಲಿಅವಧಿಗೂ ಮುನ್ನ ಘೋಷಣೆ ಆಗಿದೆ. ಸಾಮಾನ್ಯವಾಗಿ 5 ಹಂತಗಳಲ್ಲಿ ನಡೆಯುತ್ತಿದ್ದ ಚುನಾವಣೆಯನ್ನು ಈ ಬಾರಿ ಬರೀ 2 ಹಂತಗಳಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದರು. ಇನ್ನು ಗ್ರಾಮೀಣ ಪ್ರದೇಶದಲ್ಲಿ ಮತದಾನದ ವೇಳೆಯನ್ನು ಒಂದು ಗಂಟೆ ಕಡಿತಗೊಳಿಸಲಾಗಿದೆ ಎಂದರು.
ಗ್ರಾಮೀಣ ಭಾಗದ ಅನೇಕ ಮತದಾರರು ಮತಗಟ್ಟೆಗಳನ್ನು ತಲುಪಲು ತುಂಬಾ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದು ಹೇಮಂತ್ ಸೋರೇನ್ ಪರ ಗಟ್ಟಿಯಾಗಿ ನಿಂತಿರುವ ಬಡವರು, ರೈತರು, ಕಾರ್ಮಿಕರು ಮತ್ತು ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದರು.
ಇನ್ನು ರಾಜ್ಯದ 81 ವಿಧಾನಸಭೆ ಕ್ಷೇತ್ರಗಳಿಗೆ ನವೆಂಬರ್ 13 & 20ರಂದು ಮತದಾನ ನಡೆಯಲಿದ್ದು, ನವೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ.












Click it and Unblock the Notifications