12,000 ವಿದ್ಯಾರ್ಥಿನಿಯರನ್ನ ಹಿಂದಿಕ್ಕಿ ಚಂದ್ರಯಾನ ಯೋಜನೆಗೆ ಆಯ್ಕೆಯಾದ ಬಡಗಿಯ 14 ವರ್ಷದ ಮಗಳು
ಸಾಧನೆಗೆ ಬಡತನವಾಗಲಿ, ನಮ್ಮ ಕುಟುಂಬದ ಅಥವಾ ನಾವು ಬೆಳೆದು ಬಂದ ಹಿನ್ನೆಲೆಯಾಗಲಿ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುಕ್ಕೆ ಆಂಧ್ರಪ್ರದೇಶದ 14 ವರ್ಷದ ಬಾಲಕಿ ಕಂದುಲ ಜೆಸ್ಸಿಯೇ ಒಂದು ಒಳ್ಳೆಯ ಉದಾಹರಣೆ. ಏಕೆಂದರೆ ಜಗತ್ತಿನಾದ್ಯಂತ ಸಲ್ಲಿಕೆಯಾಗಿದ್ದ ಬರೋಬ್ಬರಿ 12,000 ಅರ್ಜಿಗಳನ್ನು ಹಿಂದಿಕ್ಕಿ, ವಿಶ್ವದ ಮೊಟ್ಟಮೊದಲ ಜಾಗತಿಕ ಮಹಿಳಾ ಚಂದ್ರಯಾನ ಕ್ಯೂಬ್‌ಸ್ಯಾಟ್ ಯೋಜನೆಯಾದ 'ಮಿಷನ್ ಶಕ್ತಿಸ್ಯಾಟ್'ಗೆ ಜೆಸ್ಸಿ ಆಯ್ಕೆಯಾಗಿದ್ದಾರೆ.
ಆಕೆಯ ತಂದೆ ವೃತ್ತಿಯಲ್ಲಿ ಒಬ್ಬ ಸಾಮಾನ್ಯ ಬಡಗಿ. ಆದರೆ ಆ ಬಡ ಬಡಗಿಯ ಮಗಳ ಕನಸು ಮಾತ್ರ ಬಾಹ್ಯಾಕಾಶವನ್ನ ತಲುಪಿವೆ. ಈ ಪ್ರತಿಷ್ಠಿತ ಜಾಗತಿಕ ಯೋಜನೆಗೆ ಆಯ್ಕೆಯಾಗಿರುವ ಕೇವಲ 20 ಭಾರತೀಯ ವಿದ್ಯಾರ್ಥಿನಿಯರಲ್ಲಿ ಜೆಸ್ಸಿ ಕೂಡ ಒಬ್ಬಳು, ಅಲ್ಲದೇ ಆಂಧ್ರಪ್ರದೇಶ ರಾಜ್ಯದಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿ ಎಂಬ ಅಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾಳೆ.

ಜೆಸ್ಸಿ, ಆಂಧ್ರಪ್ರದೇಶದ ಧವಳೇಶ್ವರಂನಲ್ಲಿರುವ ಜಿಲ್ಲಾ ಪರಿಷತ್ ಬಾಲಕಿಯರ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾಳೆ. ಆಕೆಯ ಈ ಬಾಹ್ಯಾಕಾಶ ಪಯಣ ಅಷ್ಟು ಸುಲಭವಾಗಿರಲಿಲ್ಲ. ಶಾಲೆಯ ಭೌತ ವಿಜ್ಞಾನ ಶಿಕ್ಷಕರು ವಿಜ್ಞಾನದ ಬಗ್ಗೆ ಅವಳಲ್ಲಿದ್ದ ಅಪಾರ ಆಸಕ್ತಿ ಮತ್ತು ಕುತೂಹಲವನ್ನ ಗುರುತಿಸಿದರು. ಈ ಜಾಗತಿಕ ಮಿಷನ್ ಶಕ್ತಿಸ್ಯಾಟ್ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಅವರು ಜೆಸ್ಸಿಗೆ ಪ್ರೋತ್ಸಾಹ ನೀಡಿದರು.
ಆದರೆ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಗಡುವನ್ನ ಜೆಸ್ಸಿ ಮತ್ತು ಅವರ ಸಹಪಾಠಿಗಳು ತಪ್ಪಿಸಿಕೊಂಡಿದ್ದರು. ಈ ಹಂತದಲ್ಲಿ ನಿರಾಸೆಗೊಂಡಿದ್ದ ಜೆಸ್ಸಿಗೆ ಆಸರೆಯಾದದ್ದು ಅದೇ ಶಿಕ್ಷಕರು. ಅವರು ವಿಶೇಷವಾಗಿ ಮನವಿ ಮಾಡಿ ಜೆಸ್ಸಿಗೆ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಟ್ಟರು. ಕಳೆದುಹೋಗಿದ್ದ ಆ ಒಂದು ಅವಕಾಶ ಇಂದು ಜೆಸ್ಸಿ ಬಾಹ್ಯಾಕಾಶದ ಕನಸನ್ನು ನನಸು ಮಾಡುತ್ತಿದೆ.
ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸವಾಲಿನ ತರಬೇತಿ
ಬಾಹ್ಯಾಕಾಶ ಯೋಜನೆಯ ಭಾಗವಾಗುವುದು ಒಬ್ಬ ವ್ಯಕ್ತಿಗೆ ಸಾಮಾನ್ಯ ಸಾಧನೆಯಲ್ಲ. 10ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಜೆಸ್ಸಿ, ತನ್ನ ಶಾಲಾ ಪಠ್ಯಕ್ರಮಕ್ಕಿಂತ ಎಷ್ಟೋ ಪಟ್ಟು ಕಠಿಣವಾದ ಹಾಗೂ ದೊಡ್ಡ ಮಟ್ಟದ ವಿಷಯಗಳನ್ನ ಅಭ್ಯಾಸ ಮಾಡಬೇಕಾಯಿತು. ಈ ಮಿಷನ್ ಶಕ್ತಿಸ್ಯಾಟ್ ಯೋಜನೆಯ ತರಬೇತಿಯ ಭಾಗವಾಗಿ ಒಟ್ಟು 21 ವಿಭಿನ್ನ ಮಾಡ್ಯೂಲ್‌ಗಳಲ್ಲಿ ಬರೋಬ್ಬರಿ 550 ತರಗತಿಗಳನ್ನು ಆಕೆ ಯಶಸ್ವಿಯಾಗಿ ಎದುರಿಸಿದ್ದಾರೆ ಎಂದರೆ ನಂಬಲಾಸಾಧ್ಯ. ಆದರೂ ನಂಬಲೇಬೇಕು.
ಈ ಸುದೀರ್ಘ ತರಬೇತಿಯಲ್ಲಿ ಜೆಸ್ಸಿ ಅವರು ಸ್ಯಾಟಲೈಟ್ ಸಿಸ್ಟಮ್ಸ್, ಪ್ರೊಪಲ್ಷನ್ (propulsion), ಥರ್ಮೋಡೈನಮಿಕ್ಸ್ (thermodynamics) ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಅತ್ಯಂತ ಕಷ್ಟದ ವಿಷಯಗಳನ್ನ ಅರ್ಥ ಮಾಡಿಕೊಂಡಿದ್ದಾರೆ. ಎಂಜಿನಿಯರಿಂಗ್ ಹಂತದಲ್ಲಿ ಕಲಿಯಬೇಕಾದ ಈ ತಾಂತ್ರಿಕ ಜ್ಞಾನವನ್ನ ಕೇವಲ 14ನೇ ವಯಸ್ಸಿನಲ್ಲಿ ಅರ್ಥಮಾಡಿಕೊಂಡಿರುವ ಆಕೆಯ ಬುದ್ಧಿ ಶಕ್ತಿಗೆ ಒಂದು ದೊಡ್ಡ ಸಲಾಂ.
ಇಂದು ಆಂಧ್ರಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮರಗೆಲಸ ಮಾಡುವ ಬಡಗಿ ಮಗಳೊಬ್ಬಳು ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾಳೆ. ಕೇವಲ ಅವಕಾಶಗಳು ಮತ್ತು ಸರಿಯಾದ ಮಾರ್ಗದರ್ಶನ ಸಿಕ್ಕರೆ ಗ್ರಾಮೀಣ ಭಾಗದ ಪ್ರತಿಭೆಗಳು ಕೂಡ ಜಾಗತಿಕ ಮಟ್ಟದಲ್ಲಿ ಹೇಗೆ ಮಿಂಚಬಹುದು ಎಂಬುದಕ್ಕೆ ಕಂದುಲ ಜೆಸ್ಸಿಯೇ ಒಂದು ಒಳ್ಳೆಯ ಉದಾಹರಣೆ.


Click it and Unblock the Notifications
