Amrit Bharat Express: 50 ಹೊಸ ಅಮೃತ್ ಭಾರತ್ ರೈಲು, ಕೇಂದ್ರ ಸಚಿವರ ಮಾಹಿತಿ
ದೆಹಲಿ, ಫೆಬ್ರವರಿ 20: ಭಾರತೀಯ ರೈಲ್ವೆ ಇಲಾಖೆಯು ಮಹತ್ವದ ಪ್ರಕಟಣೆ ಹೊರಡಿಸಿದ್ದು, ಜನರಿಂದ ಅತ್ಯುತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ ದೇಶಾದ್ಯಂತ 50 ಹೆಚ್ಚುವರಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ಪರಿಚಯಿಸಲು ಅನುಮೋದನೆ ನೀಡಿದೆ.
ಈ ಖುಷಿಯ ವಿಚಾರವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. "ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಆರಂಭಿಕ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಎರಡು ರೈಲುಗಳಿಗೆ ದೊರೆತ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ದೇಶಾದ್ಯಂತ 50 ಹೆಚ್ಚುವರಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ನೀಡಲು ಮುಂದಾಗಿದೆ" ಎಂದು ತಿಳಿಸಿದ್ದಾರೆ.

ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಹೆಚ್ಚಿಸುವುದರಿಂದ ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ ಸೇರಿದಂತೆ ವಿವಿಧ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಟ್ಟಡ, ರಸ್ತೆ ಕಾಮಗಾರಿ ಸೇರಿ ವಿವಿಧ ಕೆಲಸಗಳಿಗೆ ಬರುವ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ರೈಲಿನಲ್ಲಿ ಸುಮಾರು 1,800 ಮಂದಿ ಆರಾಮವಾಗಿ ಪ್ರಯಾಣಿಸಬಹುದಾಗಿದೆ.
ಅಮೃತ್ ಭಾರತ್ ರೈಲು ಕೇಸರಿ, ಬೂದು ಬಣ್ಣದಲ್ಲಿ ಇರಲಿದ್ದು, ರೈಲ್ವೆ ಇಲಾಖೆಯು ಈ ರೈಲು ನಿರ್ಮಾಣಕ್ಕೆ 65 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎನ್ನಲಾಗಿದೆ. ಈ ರೈಲು 800 ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ್ದು, ಅಮೃತ್ ಭಾರತ್ ರೈಲುಗಳನ್ನು ಹಗಲು - ರಾತ್ರಿ ಸಂಚಾರಕ್ಕೆ ಬಳಕೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ರೈಲ್ವೆಯ ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಇಂಟರ್‌ಸಿಟಿ ಪ್ರಯಾಣಕ್ಕಾಗಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಗಳನ್ನು ಒದಗಿಸಲು ವಿನ್ಯಾಸಗೊಳಿಸಿದೆ. ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಒಂದು ಗಂಟೆಗೆ ಗರಿಷ್ಠ 130 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ.
ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್ ಹಾಗೂ ಕಾಯ್ದಿರಿಸದ ಸೇರಿ 22 (12+8) ಕೋಚ್‌ಗಳನ್ನು ಒಳಗೊಂಡಿದ್ದು, ಇದರಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ಕೂಡ ಇರಲಿದೆ. ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಸಿಸಿಟಿವಿ, ಎಲ್‌ಇಡಿ ಲೈಟ್ ಸೇರಿ ಇತರೆ ಸೌಲಭ್ಯಗಳು ಇರಲಿದ್ದು, ಶೌಚಾಲಯ, ತುರ್ತು ವಿಪತ್ತು ನಿರ್ವಹಣಾ ಸಿಗ್ನಲ್‌ಗಳು, ಸ್ಲೈಡಿಂಗ್ ಕಿಟಕಿಗಳು, ಧೂಳಿನ ವಿರುದ್ಧ ಗ್ಯಾಂಗ್‌ವೇಗಳು ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಈ ರೈಲಿನಲ್ಲಿ ಅಳವಡಿಸಲಾಗಿದೆ.












Click it and Unblock the Notifications