ದೀಪಾವಳಿಗೂ ಮುನ್ನ ಆಯೋಗದ ಅನ್ವಯ ಸರ್ಕಾರಿ ನೌಕರರಿಗೆ ಬೋನಸ್
ನವದೆಹಲಿ, ಅಕ್ಟೋಬರ್ 07: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 2.0 ಸರ್ಕಾರದ ಮೊದಲ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ 5% ತುಟ್ಟಿಭತ್ಯೆ ಹೆಚ್ಚಳ ಖಾತ್ರಿಯಾಗಿದೆ. ಇದರ ಜೊತೆಗೆ 7ನೇ ವೇತನಾ ಆಯೋಗದ ಅನ್ವಯ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿಗೂ ಮುನ್ನ ಬೋನಸ್ ಘೋಷಣೆಯಾಗಿದೆ.
ಕೇಂದ್ರ ಸರ್ಕಾರಿ ಸ್ವಾಮಯ್ದ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನಾನ್ ಗೆಜೆಟೆಡ್ ಅಧಿಕಾರಿಗಳಿಗೆ ಇದರ ಲಾಭ ಸಿಗಲಿದೆ. ಇದು ಅನುತ್ಪಾದನಾ ಮಿಲಿತ ಬೋನಸ್(Non Product linked) ಆಗಿದೆ ಎಂದು ತಿಳಿದು ಬಂದಿದೆ.
ಆದರೆ, ಸರ್ಕಾರಿ ನೌಕರರ ಬೇಡಿಕೆಗಳು ಇನ್ನು ಕಡಿಮೆಯಾಗಿಲ್ಲ. ಪ್ರಮುಖ ಬೇಡಿಕೆಗಳು ಈಡೇರಿಲ್ಲ. ಬೇಡಿಕೆಗೆ ಅನುಸಾರವಾಗಿ ಮೂಲ ವೇತನವನ್ನು ಏರಿಕೆ ಮಾಡುವುದು ಹಾಗೂ ಫಿಟ್ಮೆಂಟ್ ಫಾರ್ಮುಲಾ ಅವರನ್ನು ಮೂಲವೇತನದ ಮೂರು ಪಟ್ಟು ಏರಿಕೆ ಮಾಡುವಂತೆ ಬೇಡಿಕೆ ಇದ್ದೇ ಇದೆ.

ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನೌಕರರಿಗೆ ಲಾಭ
ಆದೇಶದ ಪ್ರಕಾರ, NLPB ಗೆ ಅರ್ಹರಲ್ಲದ ಕೇಂದ್ರ ನೌಕರರಿಗೆ ಈ ಬೋನಸ್ ಲಭ್ಯವಾಗಲಿದ್ದು ಗ್ರೂಪ್ ಬಿ ಹಾಗೂ ಗ್ರೂಪ್ ಸಿ ನಾನ್ ಗೆಜೆಟೆಡ್ ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ. ಒಟ್ಟಾರೆ 30.04ದಿನಗಳಿಗೆ ಬೋನಸ್ ಲೆಕ್ಕ ಹಾಕಿದರೆ 6,900ರು ನಷ್ಟು ಮೊತ್ತ ಸಿಗಲಿದೆ. ಮಾರ್ಚ್ 31,2019ರ ತನಕ ಸೇವೆಯಲ್ಲಿದ್ದವರು 2018-19ರ ಅವಧಿಯಲ್ಲಿ ಆರು ತಿಂಗಳ ಸೇವಾವಧಿ ಹೊಂದಿದ್ದವರು ಕೂಡಾ ಈ ಬೋನಸ್ ಗೆ ಅರ್ಹರಾಗಿದ್ದಾರೆ.

ರೈಲ್ವೆ ಸಿಬ್ಬಂದಿಗಳಿಗೆ ಬೋನಸ್ ಮೊತ್ತ
7ನೇ ವೇತನಾ ಆಯೋಗದ ಅನ್ವಯ ಭಾರತೀಯ ರೈಲ್ವೆ ಸಿಬ್ಬಂದಿಗಳಿಗೆ ಈಗಾಗಲೇ 78 ದಿನಗಳ ಬೋನಸ್ ಘೋಷಣೆಯಾಗಿದೆ. ಇದರಲ್ಲಿ ಗ್ರೂಪ್ ಬಿ, ಗ್ರೂಪ್ ಸಿ ಹಾಗೂ ಗ್ರೂಪ್ ಡಿ ನೌಕರರು ಸೇರಿದ್ದಾರೆ. ಇದರ ಲಾಭ ಸುಮಾರು ಹನ್ನೆರಡು ಲಕ್ಷ ಉದ್ಯೋಗಿಗಳಿಗೆ ನೇರವಾಗಿ ಸಿಗಲಿದೆ. ಇದರ ಮೊತ್ತ ಸುಮಾರು 17,951 ರು ನಷ್ಟಾಗಲಿದೆ.

ಕನಿಷ್ಟ ವೇತನ ಏರಿಕೆ ಬೇಡಿಕೆ ಈಡೇರಿಲ್ಲ
ಕನಿಷ್ಟ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದರು. ಅಂದರೆ, 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ.

ತುಟ್ಟಿಭತ್ಯೆ ಹೆಚ್ಚಳ ಇತಿಹಾಸ
2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು. ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಬೇಕಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ. ಇದರ ಜತೆಗೆ ಈಗ ನಿವೃತ್ತಿ ವಯಸ್ಸು 62ಕ್ಕೇರಿಸಿದರೆ 1.1 ಕೋಟಿ ಮಂದಿಗೆ ಲಾಭವಾಗಲಿದೆ.












Click it and Unblock the Notifications