51ನೇ ವಯಸ್ಸಿನಲ್ಲಿ ಉಪ್ಪಿನಕಾಯಿ ಬಿಸಿನೆಸ್ ಶುರು ಮಾಡಿ ಇಂದು 4.8 ಕೋಟಿ ರೂ. ಆದಾಯ ಗಳಿಸುತ್ತಿರುವ ಕಲ್ಪನಾ

ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬ ಮಾತಿದೆ. ಆದರೆ, ಅದನ್ನ ನಿಜ ಜೀವನದಲ್ಲಿ ಸಾಧಿಸಿ ತೋರಿಸುವವರು ಸಂಖ್ಯೆ ಬಹಳ ಕಡಿಮೆ. ಕೇವಲ ಮನೆಯ ನಾಲ್ಕು ಗೋಡೆಗಳ ನಡುವೆ, ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಬಿಹಾರದ ದರ್ಭಾಂಗದ 51 ವರ್ಷದ ಕಲ್ಪನಾ ಝಾ ಅವರು ಇದಕ್ಕೆ ಉತ್ತಮ ಉದಾಹರಣೆ.

ತಮ್ಮ 51ನೇ ವಯಸ್ಸಿನವರೆಗೂ ಕವಡೆ ಕಾಸು ಕೂಡ ದುಡಿಯದಿದ್ದ ಕಲ್ಪನಾ ಝಾ ಅವರು, ಇಂದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ. ಇವರ 'ಝಾಜಿ ಸ್ಟೋರ್' ಯಶೋಗಾಥೆ ಪ್ರತಿಯೊಬ್ಬರಿಗೂ ನಿಜಕ್ಕೂ ಸ್ಫೂರ್ತಿ.

51 Year Old Homemaker Turns Kitchen Pickle Recipe Into Rs 4 8 Crore Business JhaJi Store Success

ಈ ಕುರಿತು ವೈಭವ್ ಬೋದನಾ ಎಂಬುವವರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸದ್ಯ ಈ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಗೃಹಿಣಿಯಿಂದ ಉಪ್ಪಿನಕಾಯಿ ಬಿಸಿನೆಸ್ ಉದ್ಯಮಿಯಾಗಿ ಬದಲಾದ ಪಯಣ

2020ರ ಕೊರೊನಾ ಸಾಂಕ್ರಾಮಿಕದ ಸಮಯವದು. ಕಲ್ಪನಾ ಝಾ ಅವರ ಪತಿ ತಮ್ಮ ಸರ್ಕಾರಿ ಕೆಲಸದಿಂದ ನಿವೃತ್ತಿಯಾಗುತ್ತಿದ್ದರು. ನಿವೃತ್ತಿ ಜೀವನವನ್ನ ಆರಾಮವಾಗಿ ಕಳೆಯುವ ಬದಲು, ಕಲ್ಪನಾ ಅವರು ದಶಕಗಳಿಂದ ತಮ್ಮ ಅಡುಗೆಮನೆಯಲ್ಲಿಯೇ ರುಚಿಕರವಾಗಿ ತಯಾರಿಸುತ್ತಿದ್ದ ಉಪ್ಪಿನಕಾಯಿಯನ್ನೇ ಒಂದು ಬಿಸಿನೆಸ್ ಆಗಿ ಪ್ರಾರಂಭಿಸಲು ನಿರ್ಧರಿಸಿದರು.

ಯಾವುದೇ ವ್ಯಾಪಾರದ ಅನುಭವವಿಲ್ಲದ ಶಾಲಾ ಶಿಕ್ಷಕಿಯಾಗಿದ್ದ ಅವರ ನಾದಿನಿ ಉಮಾ ಕೂಡ ಈ ವ್ಯವಹಾರದಲ್ಲಿ ಕೈಜೋಡಿಸಿದರು. ಬಿಸಿನೆಸ್ ಶುರು ಮಾಡಲು ಕಲ್ಪನಾ ಅವರು ತಮ್ಮ ಪತಿಯಿಂದ 12 ಲಕ್ಷ ರೂಪಾಯಿಗಳನ್ನ ಸಾಲವಾಗಿ ಪಡೆದು 'ಝಾಜಿ ಸ್ಟೋರ್' ಅನ್ನ ಆರಂಭಿಸಿದರು.

'ಶಾರ್ಕ್ ಟ್ಯಾಂಕ್ ಇಂಡಿಯಾ' ವೇದಿಕೆ ತಂದುಕೊಟ್ಟ ಮಹತ್ವದ ತಿರುವು

ತಮ್ಮ ಉಪ್ಪಿನಕಾಯಿ ಬಿಸಿನೆಸ್‌ಗೆ ಬಂಡವಾಳ ಹೂಡಿಕೆಗಾಗಿ 2021ರಲ್ಲಿ ಕಲ್ಪನಾ ಮತ್ತು ಉಮಾ ಜನಪ್ರಿಯ ರಿಯಾಲಿಟಿ ಶೋ 'ಶಾರ್ಕ್ ಟ್ಯಾಂಕ್ ಇಂಡಿಯಾ' ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆದರೆ, ಅಲ್ಲಿ ಅವರಿಗೆ ಯಾವುದೇ ಹೂಡಿಕೆ ಸಿಗದೆ ಬರಿಗೈಯಲ್ಲಿ ಹಿಂತಿರುಗಬೇಕಾಯಿತು. ಆದರೆ, ಆ ಎಪಿಸೋಡ್ ಡಿಸೆಂಬರ್‌ನಲ್ಲಿ ಟಿವಿಯಲ್ಲಿ ಪ್ರಸಾರವಾದಾಗ ದೊಡ್ಡ ಮ್ಯಾಜಿಕ್‌ಕೇ ನಡೆದ ಹೋಯಿತು.

ಕೇವಲ ಒಂದು ಗಂಟೆಯೊಳಗೆ, ಇಡೀ ತಿಂಗಳಿಗೆ ಆಗುವಷ್ಟು ಉಪ್ಪಿನಕಾಯಿ ಮಾರಾಟವಾಗಿತ್ತು. 2,000ಕ್ಕೂ ಹೆಚ್ಚು ಮಿಸ್ಡ್ ಕಾಲ್‌ಗಳು ಬಂದಿದ್ದವು. ಗ್ರಾಹಕರ ದಟ್ಟಣೆಯಿಂದ ಅವರ ವೆಬ್‌ಸೈಟ್ ಕೂಡ ಕ್ರ್ಯಾಶ್ ಆಗಿತ್ತು ಮತ್ತು ಮಾರಾಟ ಮಾಡಲು ಉಪ್ಪಿನಕಾಯಿ ಸ್ಟಾಕ್ ಕೂಡ ಸಂಪೂರ್ಣವಾಗಿ ಖಾಲಿಯಾಗಿತ್ತು.

ಹೂಡಿಕೆದಾರರನ್ನೇ ಸೆಳೆದ ಕಲ್ಪನಾ ಝಾ

ಮೊದಲ ಸೀಸನ್‌ನಲ್ಲಿ ಇವರ ಬಿಸಿನೆಸ್‌ಗೆ ಬಂಡವಾಳ ಹೂಡಲು ಹಿಂದೇಟು ಹಾಕಿದ್ದ ಶಾರ್ಕ್ ಟ್ಯಾಂಕ್ ಹೂಡಿಕೆದಾರರು, ಝಾಜಿ ಸ್ಟೋರ್‌ನ ಭಾರಿ ಯಶಸ್ಸು ಕಂಡು ಬೆರಗಾದರು. ಪ್ರಮುಖ ಹೂಡಿಕೆದಾರರಾದ ನಮಿತಾ ಥಾಪರ್ ಮತ್ತು ವಿನೀತಾ ಸಿಂಗ್ ಮುಂದಿನ ಸೀಸನ್‌ನಲ್ಲಿ ಮತ್ತೆ ಕಲ್ಪನಾ ಝಾ ಅವರ ಬಳಿ ಬಂದು, ಮೊದಲು ಹೂಡಿಕೆ ಮಾಡದಿರುವುದಕ್ಕೆ ಕ್ಯಾಮರಾ ಮುಂದೆಯೇ ಕ್ಷಮೆಯಾಚಿಸಿದರು.

ಅಲ್ಲದೆ, 8.45% ಇಕ್ವಿಟಿಗಾಗಿ ಬರೋಬ್ಬರಿ 85 ಲಕ್ಷ ರೂಪಾಯಿಗಳನ್ನ ಕಲ್ಪನಾ ಅವರ ವ್ಯವಹಾರದಲ್ಲಿ ಹೂಡಿಕೆ ಮಾಡಿದರು.

50ಕ್ಕೂ ಹೆಚ್ಚು ಮಹಿಳೆಯರಿಗೆ ಆಸರೆಯಾದ ಯಶಸ್ವಿ ಮಹಿಳಾ ಉದ್ಯಮಿ

2023ರ ವೇಳೆಗೆ, ಝಾಜಿ ಸ್ಟೋರ್‌ನ ವಾರ್ಷಿಕ ಮಾರಾಟ 4.8 ಕೋಟಿ ರೂಪಾಯಿಗಳನ್ನ ದಾಟಿದೆ. 60,000ಕ್ಕೂ ಹೆಚ್ಚು ಗ್ರಾಹಕರನ್ನ ಅವರು ಹೊಂದಿದ್ದಾರೆ. ದರ್ಭಾಂಗದಲ್ಲಿರುವ ಕಲ್ಪನಾ ಅವರ ಅಡುಗೆಮನೆ ಈಗ ದೊಡ್ಡ ಕಾರ್ಖಾನೆಯಾಗಿ ಬದಲಾಗಿದ್ದು, ಪ್ರತಿದಿನ 100 ಕೆ.ಜಿ. ಬದಲಾಗಿ 400 ಕೆ.ಜಿ. ಉಪ್ಪಿನಕಾಯಿ ತಯಾರಾಗುತ್ತಿದೆ.

"ನನ್ನ 51ನೇ ವಯಸ್ಸಿನವರೆಗೂ ನಾನು ಕೇವಲ ಒಬ್ಬ ಗೃಹಿಣಿಯಾಗಿದ್ದೆ. ಬೇರೆಯವರ ಜೊತೆ ಮಾತನಾಡಲು ಕೂಡ ಬಹಳ ಹಿಂಜರಿಯುತ್ತಿದ್ದೆ" ಎಂದು ಈ ಯಶಸ್ವಿ ಮಹಿಳಾ ಉದ್ಯಮಿ ಹೇಳುತ್ತಾರೆ. ನಾಲ್ಕು ಜನರನ್ನು ಮಾತನಾಡಿಸಲು ಅಂಜುತ್ತಿದ್ದ ಮಹಿಳೆ ಇಂದು ನೇರವಾಗಿ ಬೋರ್ಡ್ ಮೀಟಿಂಗ್‌ಗಳನ್ನ ನಡೆಸುವಷ್ಟು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ.

ಲಾಸ್‌ ಆಗಬಹುದು ಎಂದು ಭಯಪಟ್ಟುಕೊಂಡೇ ಪತಿಯಿಂದ ಪಡೆದಿದ್ದ 12 ಲಕ್ಷ ರೂಪಾಯಿ ಬಂಡವಾಳ, ಇಂದು ಅವರ ಹಳ್ಳಿಯ 50ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡಿ, ಅವರ ಕುಟುಂಬಕ್ಕೆ ಆಸರೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+