22ನೇ ವಯಸ್ಸಿನಲ್ಲಿ ಐದು ಮಕ್ಕಳ ತಾಯಿ, ಮತ್ತೊಂದು ಗರ್ಭದಲ್ಲಿ! ಇನ್ನೊಂದು ಗಂಡು ಮಗು ಬೇಕಂತೆ, ದಂಪತಿ ಆಸೆಗೆ ವೈದ್ಯರೇ ದಂಗು
ಗಂಡು ಹೆಣ್ಣು ಸಮಾನ. ಹೆಣ್ಣು ಮಕ್ಕಳು ಯಾವುದರಲ್ಲಿಯೂ ಗಂಡು ಮಕ್ಕಳಿಗಿಂತ ಕಡಿಮೆಯಿಲ್ಲ ಎನ್ನುವ ಮಾತು ಪದೇ ಪದೇ ಸಾಬೀತಾಗುತ್ತಲೇ ಇದೆ. ಸರ್ಕಾರ ಕೂಡಾ ಹೆಣ್ಣು ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹೆಣ್ಣು ಮಕ್ಕಳನ್ನು ಹೆತ್ತವರು ಹೊರೆ ಎಂದು ಭಾವಿಸಬಾರದು ಎನ್ನುವ ಕಾರಣಕ್ಕೆ ಜನುಮದಿಂದ ಕಲ್ಯಾಣದವರಿಗೆ ಸಹಾಯವಾಗುವಂತೆ ಅದೆಷ್ಟೋ ಯೋಜನೆಗಳನ್ನು ಪರಿಚಯಿಸುತ್ತಾ ಬಂದಿದೆ. ಆದರೂ ಕೆಲವರು ಮಾತ್ರ ಇನ್ನೂ ಗಂಡು ಮಗುವಿನ ಮೋಹದಿಂದ ಹೊರ ಬರುವುದೇ ಇಲ್ಲ. ಅವರಿಗೆ ವಂಶ ಬೆಳೆಯುವುದಷ್ಟೇ ಮುಖ್ಯ. ಮಾತ್ರವಲ್ಲ ತಮ್ಮ ವೃದ್ದಾಪ್ಯದ ಜೀವನಕ್ಕೆ ಮಗ ಮಾತ್ರ ಆಧಾರ ಎನ್ನುವ ಮನಸ್ಥಿತಿಯಿಂದ ಹೊರ ಬಂದೇ ಇಲ್ಲ. ರಾಜಸ್ಥಾನದ ಈ ದಂಪತಿಯೇ ಇದಕ್ಕೆ ಉದಾಹರಣೆ.
ಇಲ್ಲಿ ಕೇವಲ 22 ವರ್ಷದ ಮಹಿಳೆ ಈಗಾಗಲೇ ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆರನೇ ಮಗುವನ್ನು ಗರ್ಭದಲ್ಲಿ ಇಟ್ಟುಕೊಂಡು ವೈದ್ಯರ ಬಳಿ ಬಂದಿದ್ದಾಳೆ. ನಡೆದಾಡುವಾಗ ಏರುಸಿರು ಬರುತ್ತದೆ. ಉಸಿರು ಬಿಗಿ ಹಿಡಿಯುತ್ತದೆ. ದೇಹ ಬಲಹೀನವಾಗಿದೆ ಎಂಬೆಲ್ಲಾ ದೂರುಗಳೊಂದಿಗೆ ವೈದ್ಯರ ಬಳಿ ತನ್ನ ಪತಿ ಮತ್ತು ಐದು ಮಕ್ಕಳೊಂದಿಗೆ ಬಂದಿದ್ದಾಳೆ. 22 ವರ್ಷಕ್ಕೇ ಐದು ಮಕ್ಕಳ ತಾಯಿ ಎನ್ನುವ ಸತ್ಯ ವೈದ್ಯರನ್ನೂ ದಂಗಾಗಿಸಿದೆ.

ಈ ಹುಡುಗಿ 15ನೇ ವಯಸ್ಸಿಗೇ ಮದುವೆಯಾಗಿದ್ದಾಳೆ. ಬಾಲ್ಯ ವಿವಾಹವಾದರೂ ವರ್ಷಕ್ಕೆ ಒಂದರಂತೆ ಮಗು ಹೆತ್ತಿದ್ದಾಳೆ. ಐದು ಮಕ್ಕಳ ಪೈಕಿ ನಾಲ್ಕು ಹೆಣ್ಣಾಗಿದ್ದರೆ ಒಬ್ಬ ಗಂಡು. ಆಸೆಗೆ ಒಂದು ಗಂಡು ಮಗು ಇದೆಯಲ್ಲಾ ಎಂದು ಈ ದಂಪತಿ ಸುಮ್ಮನಾಗಿಲ್ಲ, ಒಬ್ಬ ಮಗನಿಂದ ವಂಶ ಎಷ್ಟು ಬೆಳೆಯುತ್ತದೆ, ಒಬ್ಬನೇ ಕುಟುಂಬದ ಹೊರೆಯನ್ನು ಹೇಗೆ ಹೊರುತ್ತಾನೆ? ಅದಕ್ಕಾಗಿ ಇನ್ನೊಂದು ಗಂಡು ಮಗು ಬೇಕೇ ಬೇಕು ಎನ್ನುವ ಹಠ ಇವರದ್ದು. ತಮ್ಮ ಮನಸ್ಸಿನ ಮಾತನ್ನು ವೈದ್ಯರ ಬಳಿ ಹೇಳಿಕೊಂಡಾಗ ವೈದ್ಯರು ಆಶ್ಚರ್ಯಗೊಂಡಿದ್ದಾರೆ. ಗಂಡು ಮಗುವಿನ ಆಸೆಗಾಗಿ ಮನೆ ತುಂಬಾ ಮಕ್ಕಳ ಲೈನ್ ನಿಲ್ಲಿಸುತ್ತೀರಾ ಎಂದು ದಂಪತಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ತನ್ನ ವಂಶ ಬೆಳೆಯಲು ಗಂಡು ಮಗು ಬೇಕು ಎನ್ನುವ ಒತ್ತಡವನ್ನು ಪತಿ ಹಾಕುತ್ತಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾಳೆ.
ಚಿಕ್ಕ ವಯಸ್ಸಿನಲ್ಲಿ ಪದೇ ಪದೇ ಗರ್ಭ ಧರಿಸುವುದರಿಂದ ಉಂಟಾಗುವ ಗಂಭೀರ ಆರೋಗ್ಯ ಅಪಾಯಗಳ ಬಗ್ಗೆ ವೈದ್ಯರು ದಂಪತಿಗೆ ಎಚ್ಚರಿಕೆ ನೀಡಿದ್ದಾರೆ. ಮಹಿಳೆ ಈಗಾಗಲೇ ಉಸಿರಾಟದ ತೊಂದರೆ, ತಲೆಸುತ್ತುವುದು, ದೇಹದ ನೋವಿನ ಬಗ್ಗೆ ವೈದ್ಯರಲ್ಲಿ ಅಳಲು ತೋಡಿಕೊಂಡಿದ್ದಾರೆ. ಈ ಸಮಸ್ಯೆ ಸಾಮಾನ್ಯವಾಗಿ ದೈಹಿಕ ಬಳಲಿಕೆ, ರಕ್ತಹೀನತೆ ಮತ್ತು ನಿಕಟ ಅಂತರದ ಗರ್ಭಧಾರಣೆಯಿಂದ ಉಂಟಾಗುವ ಪೌಷ್ಟಿಕಾಂಶದ ಕೊರತೆಯಿಂದಾಗಿ ಕಾಣಿಸಿಕೊಳ್ಳುತ್ತದೆ. ಹೀಗೆಯೇ ಮುಂದುವರಿದರೆ ಇದು ಮಹಿಳೆಯ ಪ್ರಾಣಕ್ಕೆ ಮುಳ್ಳಾಗಬಹುದು ಎನ್ನುವ ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆ. ಅಲ್ಲದೆ, ಆರೋಗ್ಯಕರ ಹೆರಿಗೆಗೆ ಮತ್ತು ನಂತರದ ಬದುಕಿಗೆ ಮಕ್ಕಳ ನಡುವೆ ಅಂತರ ಇರುವುದು ಎಷ್ಟು ಮುಖ್ಯ ಎನ್ನುವುದನ್ನು ಕೂಡಾ ಒತ್ತಿ ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅನೇಕ ಬಳಕೆದಾರರು ಮಹಿಳೆಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಗಂಡು ಮಕ್ಕಳಿಗೆ ಜನ್ಮ ನೀಡಲು ಮಹಿಳೆಯ ಮೇಲೆ ಹೇರಲಾದ ಸಾಮಾಜಿಕ ಒತ್ತಡದ ಬಗ್ಗೆ ಟೀಕೆ ವ್ಯಕ್ತವಾಗಿದೆ. ಗರ್ಭನಿರೋಧಕದ ಬಗ್ಗೆ ಅರಿವಿನ ಕೊರತೆ, ಬಾಲ್ಯ ವಿವಾಹ, ಕುಟುಂಬ ಯೋಜನಾ ಶಿಕ್ಷಣಕ್ಕೆ ಸೀಮಿತ ಪ್ರವೇಶ ಮತ್ತು ಸಮಾಜದ ಕೆಲವು ಭಾಗಗಳಲ್ಲಿ ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳ ಮೇಲೆ ಹೆಚ್ಚಾಗಿ ಇರಿಸಲಾಗುವ ಅಸಮಾನ ಮೌಲ್ಯದಂತಹ ವಿಶಾಲ ಸಮಸ್ಯೆಗಳತ್ತಲೂ ಅನೇಕ ಬಳಕೆದಾರರು ಗಮನಸೆಳೆದಿದ್ದಾರೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications