ಶುಭ ಸೂಚನೆ: ಭಾರತದಲ್ಲಿ ತಗ್ಗಿದ ಸಕ್ರಿಯ ಪ್ರಕರಣಗಳ ಸಂಖ್ಯೆ
ನವದೆಹಲಿ, ಮೇ 27: ಭಾರತದಲ್ಲಿ ಕೊರೊನಾ ಸೋಂಕು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ 75,684ರಷ್ಟು ಸಕ್ರಿಯ ಪ್ರಕರಣಗಳ ಇಳಿಕೆ ಕಂಡಿವೆ.
ಆದರೆ, ಗುರುವಾರದ ಆರೋಗ್ಯ ಸಚಿವಾಲಯದ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,11,298 ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿವೆ. ಇದೇ ವೇಳೆ ಸಾವಿನ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿದ್ದು, 3,847 ಸೋಂಕಿತರು ಮೃತಪಟ್ಟಿದ್ದಾರೆ.
ಇನ್ನು ಬುಧವಾರದಂದು ಒಂದೇ ದಿನ 2,83,135 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಹಿಂದಿನ ಅಂಕಿ-ಅಂಶ ಗಮನಿಸಿದರೆ ಚೇತರಿಕೆ ಪ್ರಮಾಣವೂ ಏರಿಕೆಯಾಗಿದೆ.

ಹಾಗೆಯೇ ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 2,73,69,093ಕ್ಕೆ ಏರಿಕೆಯಾಗಿದ್ದು, ಇದುವರೆಗೆ ದೇಶದಲ್ಲಿ 2,46,33,951 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೂ ದೈನಂದಿನ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದ ನಂತರ ಮತ್ತೆ ಏರಿಕೆಯಾಗುತ್ತಿರುವುದು ಜನರಲ್ಲಿ ತುಸು ಆತಂಕ ಮೂಡಿಸಿದೆ.
ಇಲ್ಲಿಯವರೆಗೆ ದೇಶದಲ್ಲಿ 3,15,235 ಸೋಂಕಿತರು ಕೋವಿಡ್‌ನಿಂದ ಮೃತಪಟ್ಟಿದ್ದರೆ, ಇನ್ನೂ 24,19,907 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಹಾಗೆಯೇ ಇದುವರೆಗೆ 20,26,95,874 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮೇ 26 ರವರೆಗೆ ಒಟ್ಟು 33,69,69,352 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 21,57,857 ಮಾದರಿಗಳನ್ನು ಬುಧವಾರ ಪರೀಕ್ಷಿಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೇಳಿದೆ.
ಸತತ 14ನೇ ದಿನವೂ ದೈನಂದಿನ ಹೊಸ ಪ್ರಕರಣಗಳಿಗಿಂತ ಚೇತರಿಕೆ ಸಂಖ್ಯೆಯೇ ಹೆಚ್ಚಾಗಿದ್ದು, ಚೇತರಿಕೆ ದರ ಶೇ. 90.01ಕ್ಕೆ ಹೆಚ್ಚಳವಾಗಿದೆ. ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ ಶೇ.10.93ರಲ್ಲಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ.9.79, ಸತತ 3ನೇ ದಿನವೂ ಶೇ.10ಕ್ಕಿಂತ ಕಡಿಮೆ ಇದೆ.












Click it and Unblock the Notifications