ಭ್ರೂಣದ ಲಿಂಗ ಬದಲಿಸುತ್ತೇನೆಂದ ಸ್ವಯಂಘೋಷಿತ ದೇವಮಾನವ ಜೈಲು ಪಾಲು
ಹೈದರಾಬಾದ್, ಆಗಸ್ಟ್ 31: ಸ್ವಯಂಘೋಷಿತ ದೇವ ಮಾನವನೊಬ್ಬನನ್ನು ಹೈದರಾಬಾದ್ ನಲ್ಲಿ ಬಂಧಿಸಲಾಗಿದೆ. ವಾಮಾಚಾರದ ಶಕ್ತಿಯಿಂದ ಗರ್ಭದಲ್ಲಿರುವ ಹೆಣ್ಣು ಭ್ರೂಣದ ಲಿಂಗ ಬದಲಾಯಿಸುವುದಾಗಿ ಹೇಳಿಕೊಂಡಿದ್ದ ಈತ ಜೈಲಿನಲ್ಲಿ ಅದೇನು ಮಾಡುತ್ತಿದ್ದಾನೋ ತಿಳಿದುಬಂದಿಲ್ಲ.
ಹತ್ತೊಂಬತ್ತು ವರ್ಷದ ಫಾತಿಮಾ ಗರ್ಭಿಣಿಯಾಗಿದ್ದಳು. ಆಕೆಯ ತವರು ಮನೆಯವರು ವರದಕ್ಷಿಣೆ-ಚಿನ್ನ ಕೊಟ್ಟಿದ್ದರೂ ಮತ್ತಷ್ಟು ವರದಕ್ಷಿಣೆಗಾಗಿ ಮಾವನ ಮನೆಯವರು ಹಿಂಸಿಸುತ್ತಿದ್ದರು. ಫಾತಿಮಾ ಗರ್ಭಿಣಿ ಎಂಬ ಸುದ್ದಿ ಗೊತ್ತಾದ ಮೇಲೆ ಬಾಬಾ ಬಳಿಗೆ ಆಕೆಯನ್ನು ಕರೆದೊಯ್ದಿದ್ದಾರೆ.

ಆತನ ಹೆಸರು ಬಾಬಾ ಭಾಯಿ ಮಿಯಾ. ಆಕೆಯ ಗುಪ್ತಾಂಗಗಳನ್ನು ಆತ ಮುಟ್ಟಿ ನೋಡಿದ್ದಾಗಿ ಫಾತಿಮಾ ದೂರಿದ್ದಾಳೆ. ಆತ ಕೆಲವು ಮಾತ್ರೆ, ಸಸ್ಯಗಳು ಹಾಗೂ ತೈಲವೊಂದನ್ನು ಕೊಟ್ಟು, ಇವುಗಳಿಂದ ಹೊಟ್ಟೆಗೆ ಮಸಾಜ್ ಮಾಡಿದರೆ ಗಂಡು ಮಗು ಹುಟ್ಟುತ್ತದೆ ಎಂದು ಆತ ತಿಳಿಸಿದ್ದಾನೆ.
ನಾನು ಗರ್ಭಿಣಿ ಅಂತ ತಿಳಿದ ಮೇಲೆ ಬಾಬಾ ಬಳಿಗೆ ಕರೆದುಕೊಂಡು ಹೋದರು. ಆತ ಅಸಭ್ಯವಾಗಿ ನನ್ನನ್ನು ಸ್ಪರ್ಶಿಸಿದ. ಈ ವಿಚಾರವನ್ನು ತನ್ನ ಮಾವ ಹಾಗೂ ಪತಿಗೂ ತಿಳಿಸಿದೆ. ಆದರೆ ಅವರು ನನ್ನ ಮಾತನ್ನು ಕೇಳಿಸಿಕೊಳ್ಳಲಿಲ್ಲ. ದೇವರ ನಂತರ ನಾವು ಬಾಬಾ ಮಾತನ್ನು ಮಾತ್ರ ಕೇಳುತ್ತೇವೆ ಎಂದು ಹೇಳಿದರು ಎಂಬುದಾಗಿ ಫಾತಿಮಾ ಅಲವತ್ತುಕೊಂಡಿದ್ದಾಳೆ.
ಯಾವಾಗ ಫಾತಿಮಾ ಬಾಬಾ ಬಳಿ ಹೋಗಲು ನಿರಾಕರಿಸಿದಳೋ ಕೂದಲು ಕತ್ತರಿಸಿ ವಾಮಾಚಾರ ಪ್ರಯೋಗಕ್ಕಾಗಿ ಕೊಂಡೊಯ್ದರು ಎಂದು ಆಕೆ ತಿಳಿಸಿದ್ದಾರೆ. ಆದರೆ ಆಕೆಗೆ ಹೆಣ್ಣುಮಗು ಜನಿಸಿದೆ. ಇದರಿಂದ ಕುಪಿತನಾದ ಫಾತಿಮಾ ಪತಿ, ಬಾಬಾ ಮಾತು ಕೇಳದಿದ್ದರಿಂದ ಹೆಣ್ಣುಮಗು ಜನಿಸಿದೆ ಎಂದು ವಿಚ್ಛೇದನದ ನೋಟಿಸ್ ಕಳಿಸಿದ್ದಾನೆ.
ಇದೀಗ ಬಾಬಾ ಹಾಗೂ ಫಾತಿಮಾಳ ಗಂಡನ ಮನೆಯವರ ವಿರುದ್ಧ ವಿವಿಧ ಸೆಕ್ಷನ್ ಗಳಡಿ ದೂರು ದಾಖಲಿಸಲಾಗಿದೆ.












Click it and Unblock the Notifications