ಚೀನಾ ನಿರ್ಮಿತ, 135 ಕೋಟಿ ವೆಚ್ಚದ ಸಮಾನತೆ ಪ್ರತಿಮೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಹೈದರಾಬಾದ್, ಫೆಬ್ರವರಿ 5: ಹನ್ನಂದನೇ ಶತಮಾನದ ಸಂತ ಶ್ರೀರಾಮಾನುಜಚಾರ್ಯರ 1,000ನೇ ಜನ್ಮೋತ್ಸವ ಸಂಭ್ರಮದ ಸಂದರ್ಭದಲ್ಲಿ 216 ಅಡಿ ಎತ್ತರದ ರಾಮಾನುಜಾಚಾರ್ಯರ ಪಂಚಲೋಹದ, ಚೀನಾ ನಿರ್ಮಿತ ಬೃಹತ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.
ಭಾರತ ಕಂಡ ಸಂತ ಶ್ರೇಷ್ಠರಲ್ಲಿ ಶ್ರೀ ರಾಮಾನುಜಾಚಾರ್ಯರೂ ಒಬ್ಬರಾಗಿದ್ದು, ವೈಷ್ಣವ ಸಂತ ಎಂದೇ ಕರೆಯಲ್ಪಡುವ ರಾಮಾನುಜಾಚಾರ್ಯರು, ವಿಶಿಷ್ಟಾದ್ವೈತ ಪಂತವನ್ನು ಸಾರುವ ಮೂಲಕ ಸನಾತನ ಸಂಸ್ಕೃತಿಗೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ. ಹೈದರಾಬಾದ್ ಬಳಿಯಲ್ಲಿ ನಿರ್ಮಾಣಗೊಂಡಿರುವ 216 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಶನಿವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು.
ರಾಮಾನುಜರ ಅದ್ವೈತ ಸಿದ್ಧಾಂತ ನಮಗೆ ಪ್ರೇರಣೆ
ರಾಮಾನುಜಾಚಾರ್ಯರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಮಾನತೆಯ ಪ್ರತಿಮೆ ಯುವಕರನ್ನು ಸ್ಫೂರ್ತಿಗೊಳಿಸುತ್ತದೆ. ರಾಮಾನುಜಾಚಾರ್ಯರ ಈ ಪ್ರತಿಮೆ ಅವರ ಜ್ಞಾನ, ನಿರ್ಲಿಪ್ತತೆ ಮತ್ತು ಆದರ್ಶಗಳ ಸಂಕೇತವಾಗಿದೆ ಎಂದು ಬಣ್ಣಿಸಿದರು.

ರಾಮಾನುಜಾಚಾರ್ಯರ ಜ್ಞಾನ ಇಡೀ ವಿಶ್ವಕ್ಕೇ ವ್ಯಾಪಿಸಲಿ. ಯುಗ ಯುಗಗಳವರೆಗೆ ನಾವು ಮಾನವತ್ವಕ್ಕೆ ದಿಕ್ಕನ್ನು ತೋರಿಸಿದ್ದೇವೆ. ಮಾನವೀಯತೆ ಶಕ್ತಿಗೆ ಮೂರ್ತರೂಪ ನೀಡಲಾಗಿದೆ. ಪ್ರತಿಮೆ ಮುಂದಿನ ಪೀಳಿಗೆಗೆ ಮಾತ್ರ ಪ್ರೇರಣೆ ನೀಡಲ್ಲ. ಭಾರತದ ಪುರಾತನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ರಾಮಾನುಜಾಚಾರ್ಯರ ಅನುಯಾಯಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಲ್ಲಿ 108 ಮಂದಿರಗಳನ್ನು ನಿರ್ಮಾಣ ಮಾಡಲಾಗಿದೆ. ಒಂದೇ ಸ್ಥಳದಲ್ಲಿ 108 ಮಂದಿರಗಳ ದರ್ಶನ ಸಿಗುತ್ತಿದೆ. ನಮ್ಮಲ್ಲಿ ದ್ವೈತ, ಅದ್ವೈತ ಎರಡೂ ಇವೆ. ರಾಮಾನುಜರ ವಿಶಿಷ್ಟಾದ್ವೈತ ಸಿದ್ಧಾಂತ ನಮಗೆ ಪ್ರೇರಣೆಯಾಗಿದೆ. ರಾಮಾನುಜರ ಭಾಷ್ಯಗಳಲ್ಲಿ ಜ್ಞಾನದ ಪರಾಕಾಷ್ಠೆ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಶ್ರೀರಾಮಾನುಜಾಚಾರ್ಯರ ಜೀವನ
ರಾಮಾನುಜಾಚಾರ್ಯರು ತಮಿಳುನಾಡಿನ ಪೆರಂಬುದೂರು ಎಂಬಲ್ಲಿ ಸುಮಾರು 1017ರಲ್ಲಿ ಜನಿಸಿದರು. ರಾಮಾನುಜಾಚಾರ್ಯ ಅವರ ಗುರುಗಳು ಯಾದವ ಪ್ರಕಾಶ. ಇವರು ಬಹು ದೊಡ್ಡ ವಿದ್ವಾಂಸರು. ಇವರು ಪ್ರಾಚೀನ ಅದ್ವೈತ ವೇದಾಂತ ಸನ್ಯಾಸ ಸಂಪ್ರದಾಯದ ಭಾಗವಾಗಿದ್ದರು. ಅವರು ವೇದಗಳ ಸಾರವನ್ನು 9 ಗ್ರಂಥಗಳ ರೂಪದಲ್ಲಿ ಪ್ರಸ್ತುತಪಡಿಸಿದರು. ಜೀವನದುದ್ದಕ್ಕೂ ಶ್ರೀರಾಮಾನುಜಾಚಾರ್ಯರು ಸಮಾಜದಲ್ಲಿನ ಎಲ್ಲಾ ರೀತಿಯ ಅಸಮಾನತೆಯ ವಿರುದ್ಧ ಹೋರಾಡಿದರು. ಅವರನ್ನು ಭಾರತೀಯ ಶ್ರೇಷ್ಠ ಸಂತರುಗಳಲ್ಲಿ ಒಬ್ಬರು ಎಂದು ಗುರುತಿಸಿ, ಗೌರವಿಸಲಾಗಿದೆ.

216 ಅಡಿ ಎತ್ತರದ ಬೃಹತ್ ಪ್ರತಿಮೆ
ವಿಶಿಷ್ಟಾದ್ವೈತ ಸಿದ್ಧಾಂತದ ಪ್ರಚಾರಕ ಶ್ರೀರಾಮನುಜಾಚಾರ್ಯರ ಜನ್ಮ ಸಹಸ್ರಾಬ್ದಿಯ ನೆನಪಿಗಾಗಿ ಬೃಹತ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. 216 ಅಡಿ ಎತ್ತರದ ಬೃಹತ್ ಪ್ರತಿಮೆಯು ವಿಶ್ವದ ಎರಡನೇ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ ಹೊಂದಿದೆ.
ಪದ್ಮಾಸನ ಹಾಕಿ ಕುಳಿತ ಭಂಗಿಯಲ್ಲಿರುವ 216 ಅಡಿ ಎತ್ತರದ ರಾಮಾನುಜಾಚಾರ್ಯರ ಪ್ರತಿಮೆ ಹೈದರಾಬಾದ್‌ನ ಶಂಶಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಮುಂಚಿಂತಾಲ್ ಗ್ರಾಮದ ಬಳಿ ಇಂದು ಅನಾವರಣಗೊಂಡಿದೆ.
ರಾಮಾನುಜಾಚಾರ್ಯರ ಪ್ರತಿಮೆ ವಿಶೇಷತೆ
ಶ್ರೀರಾಮಾನುಜಾಚಾರ್ಯರ ಪ್ರತಿಮೆಯನ್ನು ಪಂಚಲೋಹ ಬಳಸಿ ನಿರ್ಮಾಣ ಮಾಡಲಾಗಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ ಹಾಗೂ ಜಿಂಕ್ ಸೇರಿ ಐದು ಲೋಹಗಳಿಂದ ಈ ಪ್ರತಿಮೆ ತಯಾರಾಗಿದೆ. ಇಲ್ಲಿರುವ ಗರ್ಭಗುಡಿಯನ್ನು 120 ಕಿಲೋ ಗ್ರಾಂ ಬಂಗಾರದಿಂದ ನಿರ್ಮಿಸಲಾಗಿದೆ.

135 ಕೋಟಿ ಮೊತ್ತದ ಈ ಯೋಜನೆಯನ್ನು ಜಾಗತಿಕವಾಗಿ ಇರುವ ಭಕ್ತ ಜನರ, ದಾನಿಗಳ ನಿಧಿ ಸಂಗ್ರಹಣೆಯ ಮೊತ್ತದಿಂದ ನಿರ್ಮಿಸಲಾಗಿದೆ. ಇಲ್ಲಿ 108 ದಿವ್ಯ ದೇಶ, 108 ಸುಂದರ ವಿಷ್ಣು ದೇಗುಲಗಳು ಇವೆ. ತಮಿಳು ಸಂತರಾದ ಆಳ್ವಾರರು ಉಲ್ಲೇಖಿಸಿರುವ ರೀತಿಯಲ್ಲೇ ರಾಮಾನುಜರ ಪ್ರತಿಮೆ ನಿರ್ಮಾಣಗೊಂಡಿದೆ.
200 ಎಕರೆ ಪ್ರದೇಶದಲ್ಲಿ ಸಮಾನತೆಯ ಪ್ರತಿಮೆ
ಶ್ರೀರಾಮಾನುಜಾಚಾರ್ಯರು ಸನಾತನ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದವರು. ಜೊತೆಗೆ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಹೋರಾಡಿದವರು. ಹೀಗಾಗಿ ಅವರ ಪ್ರತಿಮೆಗೆ ಸಮಾನತೆಯ ಪ್ರತಿಮೆ ಎಂದು ಹೆಸರಿಡಲಾಗಿದೆ. ಈ ಸಮಾನತೆಯ ಪ್ರತಿಮೆಯನ್ನು 200 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ.
ತೆಲಂಗಾಣ ಸಿಎಂ ಕೆಸಿಆರ್ ಅನುಪಸ್ಥಿತಿ
ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯ ಉದ್ಘಾಟನೆಗೆಂದು ಪ್ರಧಾನಿ ನರೇಂದ್ರ ಮೋದಿ ಹೈದರಾಬಾದ್‌ಗೆ ಆಗಮಿಸಿದ್ದರು, ಆದರೆ ಅವರನ್ನು ಬರಮಾಡಿಕೊಳ್ಳಲು ಸಿಎಂ ಕೆ. ಚಂದ್ರಶೇಖರ್ ರಾವ್ ಬಂದಿರಲಿಲ್ಲ. ಅಲ್ಲದೆ ರಾಮಾನುಜಾಚಾರ್ಯರ ಪ್ರತಿಮೆಯ ಉದ್ಘಾಟನೆ ಸಮಾರಂಭದಲ್ಲೂ ಪಾಲ್ಗೊಂಡಿರಲಿಲ್ಲ.












Click it and Unblock the Notifications