ವೈಭವ್ ಸೂರ್ಯವಂಶಿ ದೇವರ ಮಗ, ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು: ಟೀಮ್ ಇಂಡಿಯಾ ಮಾಜಿ ನಾಯಕ
Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟ ಆಡಿ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿನೋಡುವಂತೆ ಮಾಡಿದ್ದರು. ಬಳಿಕ ಈ ಬಾಲಕ ಭಾರತದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದು, ಆಗಿನಿಂದ ಇವರನ್ನ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಕೆ ಮಾಡಲಾಗಿತ್ತು. ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಭಾರತೀಯ ಕ್ರಿಕೆಟ್ ಜಗತ್ತಿನ ಗಮನ ಸೆಳೆದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅದ್ಭುತ ಆಟಕ್ಕೆ ಇಡೀ ದೇಶವೇ ಫಿದಾ ಆಗಿದೆ. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸಿದ ಈ ಬಾಲಕ ಇದೀಗ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಭಾರತೀಯ ಟಿ20 ತಂಡಕ್ಕೂ ಆಯ್ಕೆಯಾಗಿದ್ದಾರೆ.

ವೈಭವ್ ಸೂರ್ಯವಂಶಿ ಅವರ ಈ ಅಪ್ರತಿಮ ಯಶಸ್ಸಿನ ಬೆನ್ನಲ್ಲೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಈ ಯುವ ಆಟಗಾರನ ಬೆಂಬಲಕ್ಕೆ ನಿಂತಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ವೈಭವ್ ಅವರನ್ನು ಹೋಲಿಸುವುದನ್ನು ನಿಲ್ಲಿಸುವಂತೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
'ಸಚಿನ್ ಕ್ರಿಕೆಟ್ ದೇವರು, ವೈಭಬ್ ದೇವರ ಮಗ'
ವೈಭವ್ ಸೂರ್ಯವಂಶಿ ಅವರನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೆ ಹೋಲಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಕಾಂತ್, 'ದಯವಿಟ್ಟು ಸಚಿನ್ ಮತ್ತು ಸೂರ್ಯವಂಶಿ ಅವರನ್ನು ಹೋಲಿಸಬೇಡಿ. ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಲೋಕದ ದೇವರು. ಆದರೆ ಈ 15 ವರ್ಷದ ಹುಡುಗ ವೈಭವ್ 'ದೇವರ ಮಗ' ಇದ್ದಂತೆ. ಸಚಿನ್ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ, ಅವರ ಹತ್ತಿರ ಬರಲು ಯಾರಿಂದಲೂ ಸಾಧ್ಯವಿಲ್ಲ,' ಎಂದು ನೇರವಾಗಿ ಹೇಳಿದ್ದಾರೆ.
ಕೃಷ್ಣಮಾಚಾರಿ ಶ್ರೀಕಾಂತ್ ಮನವಿ ಏನು?
ಸಚಿನ್ ತೆಂಡೂಲ್ಕರ್ ಅವರು 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದನ್ನು ನೆನಪಿಸಿಕೊಂಡ ಶ್ರೀಕಾಂತ್, ವೈಭವ್ ಅವರ ಆಟವನ್ನು ಅತಿಯಾಗಿ ವಿಶ್ಲೇಷಿಸದಂತೆ ಅಭಿಮಾನಿಗಳು ಮತ್ತು ತಜ್ಞರಿಗೆ ಕಿವಿಮಾತು ಹೇಳಿದ್ದಾರೆ. ಇದೇ ವೇಳೆ ವೈಭವ್‌ಗೂ ಮಹತ್ವದ ಸಲಹೆ ನೀಡಿದ್ದಾರೆ. 'ವೈಭವ್ ಜನರು ನಿನ್ನ ಬಗ್ಗೆ ಏನು ಮಾತನಾಡುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಿನ್ನ ಸ್ವಾಭಾವಿಕ ಆಟವನ್ನು ನೀನು ಮುಂದುವರೆಸು,' ಎಂದು ಸಲಹೆ ನೀಡಿದರು. ಮುಂದುವರೆದು ಮಾತನಾಡಿದ ಅವರು, 'ಕೇವಲ ಒಂದು ಸರಣಿಯ ಪ್ರದರ್ಶನದ ಆಧಾರದ ಮೇಲೆ ಒಬ್ಬ ಆಟಗಾರನನ್ನು ಯಾರೂ ನಿರ್ಣಯಿಸಬಾರದು,' ಎಂದು ಮನವಿ ಮಾಡಿದ್ದಾರೆ.
ವೈಭವ್ ಆಟ ಕೊಂಡಾಡಿದ ಮಾಜಿ ಕ್ರಿಕೆಟರ್
ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಅವರು, 'ಅಂಡರ್-19 ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರ ಬ್ಯಾಟಿಂಗ್ ಶೈಲಿ ಬೆರಗುಗೊಳಿಸುವಂತಿದೆ. ವಿಶ್ವದ ಶ್ರೇಷ್ಠ ಬೌಲರ್‌ಗಳ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸುವ ಅವರಲ್ಲಿನ ಧೈರ್ಯ ಮತ್ತು ಬ್ಯಾಟ್ ಸ್ವಿಂಗ್ ಅದ್ಭುತವಾಗಿದೆ. ಐಪಿಎಲ್‌ನ ಎರಡನೇ ವರ್ಷದಲ್ಲೇ ಅವರು ವಿಶ್ವದ ಪ್ರಮುಖ ಕ್ರಿಕೆಟಿಗರನ್ನು ಹಿಂದಿಕ್ಕಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ತಂಡವು ಆರಂಭದಲ್ಲೇ ವಿಕೆಟ್ ಕಳೆದುಕೊಂಡಾಗ ಅವರು ತೋರಿದ ತಾಳ್ಮೆಯ ಆಟ ಅವರ ಸ್ಥಿರ ಮನಸ್ಥಿತಿಯನ್ನು ಎತ್ತಿತೋರಿಸುತ್ತದೆ,' ಎಂದು ಹೊಗಳಿದ್ದಾರೆ.
ವೈಭವ್ ಸೂರ್ಯವಂಶಿ ಟೆಸ್ಟ್ ಬಗ್ಗೆ ಭವಿಷ್ಯ
'ವೈಭವ್ ಸೂರ್ಯವಂಶಿ ಅವರಲ್ಲಿ ಕ್ರೀಡಾಂಗಣಕ್ಕೆ ಪ್ರೇಕ್ಷಕರನ್ನು ಸೆಳೆಯುವ ಅಪರೂಪದ ಶಕ್ತಿಯಿದೆ. ಒಂದು ವೇಳೆ ಅವರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡರೆ ಭವಿಷ್ಯದಲ್ಲಿ ಟೆಸ್ಟ್ ಕ್ರಿಕೆಟ್ ಮಿಂಚಬಹುದು,' ಎಂದು ಭವಿಷ್ಯ ನುಡಿದಿದ್ದಾರೆ. 'ಮುಂಬರುವ ಇಂಗ್ಲೆಂಡ್ ಸರಣಿಯಲ್ಲಿ ಅವರನ್ನು ಬೆಂಚ್ ಕಾಯುವ ಆಟಗಾರರ ಪಟ್ಟಿಯಲ್ಲಿಟ್ಟು, ಅಂತಾರಾಷ್ಟ್ರೀಯ ಕ್ರಿಕೆಟ್‌ನ ವಾತಾವರಣವನ್ನು ಅರ್ಥಮಾಡಿಕೊಳ್ಳಲು ಮ್ಯಾನೇಜ್‌ಮೆಂಟ್ ಅವಕಾಶ ನೀಡಬೇಕು. ಅವರನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳಬೇಕು,' ಎಂದು ಅವರು ಬಿಸಿಸಿಐಗೆ ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್ ಅವರು ವೈಭವ್ ಅವರನ್ನು ದೇವರ ಮಗ ಎಂದು ಕರೆದು ಅಚ್ಚರಿ ಮೂಡಿಸಿದ್ದಾರೆ.












Click it and Unblock the Notifications