ಮಿಷನ್ 60: ತೆಲಂಗಾಣ ಜಿದ್ದಾಜಿದ್ದಿಗೆ ಅಮಿತ್ ಶಾ ನೀಡಿದ ಟಾರ್ಗೆಟ್
ಹೈದರಾಬಾದ್, ಅಕ್ಟೋಬರ್ 08: ಚುನಾವಣಾ ಆಯೋಗ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಿಸುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಡಿ.7 ರಂದು ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ 60 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್ ಅನ್ನು ಬಿಜೆಪಿಗೆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತೆಲಂಗಾಣದ ಕರೀಂನಗರದಲ್ಲಿ ಬುಧವಾರ ಬಿಜೆಪಿ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ 60 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕೆ ಪಕ್ಷ ಯೋಜನೆಗಳನ್ನು ರೂಪಿಸಿಕೊಳ್ಳಲಿದೆ. ಈ ಸಭೆಯಲ್ಲಿ ಅಮಿತ್ ಶಾ ಅವರು ಸಹ ಭಾಗವಹಿಸಲಿದ್ದಾರೆ.

ಬಿಜೆಪಿಗೆ ಮಿಷನ್ 60+ ಸಾಧ್ಯವಿದೆಯಾ?
ಆಂಧ್ರ ಪ್ರದೇಶ-ತೆಲಂಗಾಣಗಳು ಪ್ರತ್ಯೇಕ ರಾಜ್ಯವಾಗಿ ವಿಭಜನೆಯಾದ ನಂತರ 2014 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದಿದ್ದು ಕೇವಲ 5 ಸ್ಥಾನಗಳನ್ನು ಮಾತ್ರ! ಐದರಿಂದ ಅರವತ್ತಗೆ ಜಿಗಿಯುವುದಕ್ಕೆ ಬಿಜೆಪಿಗೆ ಸಾಧ್ಯವಿದೆಯಾ? ತೆಲಂಗಾಣ ರಾಷ್ಟ್ರೀಯ ಸಮಿತಿಯ ಪ್ರಾಬಲ್ಯ ಸಾಕಷ್ಟಿರುವ ತೆಲಂಗಾಣದಲ್ಲಿ, ಕೆ.ಚಂದ್ರಶೇಖರ್ ರಾವ್ ಅವರ ಸರ್ಕಾರದ ಮೇಲೆ ಜನರಿಗೆ ಸಾಕಷ್ಟು ಉತ್ತಮ ಅಭಿಪ್ರಾಯವಿದೆ. ಹೀಗಿರುವಾಗ ಬಿಜೆಪಿಗೆ ಅರವತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ತೀರಾ ಕಷ್ಟ ಎಂಬುದು ರಾಜಕೀಯ ಪಂಡಿತರ ಅಂಬೋಣ.

ನಾಯಕತ್ವದ ಕೊರತೆ
ತೆಲಂಗಾಣದಲ್ಲಿ ಹೇಳಿಕೊಳ್ಳುವಂಥ ನಾಯಕರು ಬಿಜೆಪಿಯಲ್ಲಿಲ್ಲವೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿಕೊಂಡೇ ಪ್ರಚಾರಕ್ಕೆ ಹೊರಡಬೇಕಾದ ಅನಿವಾರ್ಯತೆ ಇಲ್ಲಿದೆ. ತೆಲಂಗಾಣ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಕೆ ಲಕ್ಷ್ಮಣ್, 'ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ ತೆಲಂಗಾಣದಲ್ಲಿ ಯಾಕೆ ಸಾಧ್ಯವಿಲ್ಲ? ನಾವು ಅರವತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ' ಎಂದು ವಿಶಸ್ವಾಸ ವ್ಯಕ್ತಪಡಿಸಿದ್ದಾರೆ.

ಅಭ್ಯರ್ಥಿಗಳ ಹೆಸರು ಘೋಷಣೆ
ಬುಧವಾರ(ಸೆ.10) ಕರೀಂನಗರದಲ್ಲಿ ಸಭೆ ಸೇರಲಿರುವ ಬಿಜೆಪಿ ಮುಖಂಡರು, ಅರವತ್ತು ಸ್ಥಾನ ಗೆಲ್ಲುವ ಕುರಿತು ಯೋಜನೆ ರೂಪಿಸಲಿದ್ದಾರೆ. ಜೊತೆಗೆ ಅದೇ ದಿನ ಬಿಜೆಪಿ ತನ್ನ ಅಭ್ಯರ್ಥಿಗಳನ್ನೂ ಘೋಷಣೆ ಮಾಡುವ ಸಾಧ್ಯತೆ ಇದೆ.

ಡಿ.7 ರಂದು ಮತದಾನ, ಡಿ.11 ರಂದು ಫಲಿತಾಂಶ
ಸೆಪ್ಟೆಂಬರ್ 6 ರಂದು ವಿಸರ್ಜನೆಯಾದ ತೆಲಂಗಾಣ ವಿಧಾನಸಭೆಗೂ ನಾಲ್ಕು ರಾಜ್ಯಗಳ(ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಮಿಜೋರಾಂ) ವಿಧಾನಸಭೆ ಚುನಾವಣೆಯ ಸಮಯದಲ್ಲೇ ದಿನಾಂಕ ಘೋಷಿಸಲಾಗಿದ್ದು, ಒಂದೇ ಹಂತದಲ್ಲಿ ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ. ಡಿ.7 ರಂದು ಮತದಾನ ನಡೆದರೆ, ಡಿ. 11 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications