ಶಿಕಾಗೋದಲ್ಲಿ ಹೈದರಾಬಾದ್ ಮೂಲದ ವಿದ್ಯಾರ್ಥಿ ಮೇಲೆ ಗುಂಡಿನ ದಾಳಿ
ಹೈದರಾಬಾದ್, ಡಿಸೆಂಬರ್ 11: ಶಿಕಾಗೋದಲ್ಲಿ ಹೈದರಾಬಾದ್ ಮೂಲದ ವಿದ್ಯಾರ್ಥಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಅವರ ಕುಟುಂಬಸ್ಥರು ಭಾನುವಾರ ತಿಳಿಸಿದ್ದಾರೆ.
ಪಾರ್ಕಿಂಗ್ ಏರಿಯಾದಲ್ಲಿ ಮೊಹಮ್ಮದ್ ಅಕ್ಬರ್ ತಮ್ಮ ಕಾರಿನತ್ತ ತೆರಳುತ್ತಿದ್ದ ಸಂದರ್ಭ ಅವರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ. ಡಿಸೆಂಬರ್ 6ರಂದೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ತೆಲಂಗಾಣ ಗೃಹ ಸಚಿವ ನರಸಿಂಹ ರೆಡ್ಡಿಯವರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದು ಸಹಾಯ ಹಸ್ತ ಯಾಚಿಸಿದ್ದಾರೆ. ಸದ್ಯ ಅಕ್ಬರ್ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಎಫ್ 1 ವೀಸಾದ ಮೇಲೆ ಅಮೆರಿಕಾಗೆ ತೆರಳಿದ್ದ ಮೊಹಮ್ಮದ್ ಅಕ್ಬರ್ ಅಲ್ಲಿನ ಡೆವ್ರಿ ವಿವಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದ ಮೇಲೆ ಉನ್ನತ ವ್ಯಾಸಾಂಗ ನಡೆಸುತ್ತಿದ್ದರು.
ಘಟನೆಗೂ ಎರಡೂ ದಿನಕ್ಕೂ ಮೊದಲು ನಾನು ಆತನಲ್ಲಿ ಮಾತನಾಡಿದ್ದೆ. ಇದೀಗ ಆತನ ಮೇಲೆ ಗುಂಡಿನ ದಾಳಿ ನಡೆದಿರುವುದನ್ನು ಕೇಳಿ ಅಘಾತವಾಗಿದೆ. ಆತನ ದೇಹಕ್ಕೆ ಎಷ್ಟು ಬುಲೆಟ್ ಹೊಕ್ಕಿದೆ ಎಂಬ ಬಗ್ಗೆಯೂ ಸರಿಯಾಗಿ ಗೊತ್ತಿಲ್ಲ ಎಂದು ಅವರ ಸಹೋದರ ಅಶ್ರಫ್ ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications