ಹೈದ್ರಾಬಾದ್ : ಶಾಸಕರಿರುವ ಈ ಹೋಟೆಲ್ ಗಳ ಬಾಡಿಗೆ ಎಷ್ಟು?
ಹೈದ್ರಾಬಾದ್, ಮೇ 18 : ಆಪರೇಷನ್ ಕಮಲದಿಂದ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು, ಜೆಡಿಎಸ್ ಹಾಗೂ ಕಾಂಗ್ರೆಸ್ ರಾಜ್ಯ ನಾಯಕರು ಹೊಸದಾಗಿ ಆಯ್ಕೆಯಾದ ಎಲ್ಲಾ ಎಂಎಲ್ಎಗಳನ್ನು ಬೆಂಗಳೂರಿನಿಂದ ಹೈದರಾಬಾದ್ ಗೆ ಶಿಫ್ಟ್ ಮಾಡಿದ್ದಾರೆ.
ಹೈದ್ರಾಬಾದ್ ನಲ್ಲಿರುವುದು ಟಿಆರ್ಎಸ್ ಪಕ್ಷದ ಸರ್ಕಾರ. ಕರ್ನಾಟಕ ಚುನಾವಣೆಗೆ ಮುನ್ನ ಟಿಆರ್ಎಸ್ ಪಕ್ಷದ ನಾಯಕ, ತೆಲಂಗಾಣ ಮುಖ್ಯಮಂತ್ರಿ ಟಿ ಚಂದ್ರಶೇಖರ ರಾವ್ ದೇವೇಗೌಡರ ನೇತೃತ್ವದ ಜೆಡಿಎಸ್ ಗೆ ಬೆಂಬಲ ಘೋಷಿಸಿದ್ದರು.
ಈ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ತಮ್ಮ ಶಾಸಕರು ಹೆಚ್ಚು ಸೇಫ್ ಎಂದು ಉಭಯ ಪಕ್ಷಗಳು ಭಾವಿಸಿರುವಂತಿದೆ. ಅಂದಹಾಗೆ ಎರಡೂ ಪಕ್ಷಗಳ ಶಾಸಕರನ್ನು ಈಗ ನಗರದ ಎರಡು ಹೋಟೆಲ್ ಗಳಲ್ಲಿ ಕೂಡಿಹಾಕಲಾಗಿದೆ. ಅವರ ಕೈಗೆ ಮೊಬೈಲ್ ಕೂಡ ಕೊಡಲಾಗಿಲ್ಲ ಎನ್ನುತ್ತಿವೆ ಮೂಲಗಳು.

ಅಂದಹಾಗೆ ಹೈದ್ರಾಬಾದ್ ನ ಈ ಎರಡು ಹೋಟೆಲ್‍ಗಳನ್ನೇ ಆಯ್ಕೆ ಮಾಡಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಒಂದು ಒಳ್ಳೆಯ ಕಾರಣವಿದೆ. ಮೊದಲಿಗೆ ಕೊಚ್ಚಿನ್ ಅಥವಾ ಪುದುಚೇರಿಗೆ ತಮ್ಮ ಶಾಸಕರನ್ನು ಕರೆದೊಯ್ಯಲು ಉಭಯ ಪಕ್ಷಗಳು ನಿರ್ಧರಿಸಿದ್ದವು. ಆದರೆ ಅದು ಕಾಸ್ಟ್ಲಿ ಮ್ಯಾಟರ್. ಹೀಗಾಗಿ ಈ ಯೋಜನೆ ಬಿಡಲಾಯಿತು.
ಹೈದ್ರಾಬಾದ್ ನಲ್ಲಿ ಸದ್ಯ ಶಾಸಕರು ಬೀಡುಬಿಟ್ಟಿರುವುದು ಹೋಟೆಲ್ ತಾಜ್ ಕೃಷ್ಣಾ ಮತ್ತು ನವೋಟೆಲ್ ಗಳಲ್ಲಿ. ನಗರದ ಪಂಚತಾರಾ ಹೋಟೆಲ್ ಗಳ ಪೈಕಿ ಈ ಎರಡು ಹೋಟೆಲ್ ಗಳು ತುಂಬಾ ಅಗ್ಗವಂತೆ. ತಾಜ್ ಕೃಷ್ಣಾದಲ್ಲಿ ಒಂದು ರಾತ್ರಿಯ ಬಾಡಿಗೆ 11,000 ರೂಪಾಯಿಗಳಾದರೆ, ನವೋಟೆಲ್ ಹೋಟೆಲ್ ಬಾಡಿಗೆ ದಿನವೊಂದಕ್ಕೆ ರೂಪಾಯಿ 6ರಿಂದ 7 ಸಾವಿರ.
ಇದು ಡಬಲ್ ರೂಮ್ ಬಾಡಿಗೆ. ಇನ್ನು ಪ್ರೆಸಿಡೆಂಟ್ ಸೂಟ್ ಬೆಲೆ ಎರಡೂ ಹೋಟೆಲ್ ಗಳಲ್ಲಿ ರೂಪಾಯಿ 75,000 ಮೇಲಿದೆ.
ಬಾರ್, ಈಜುಕೊಳ, ಒಳ್ಳೆ ಊಟ ಹೀಗೆ ಎಲ್ಲದಕ್ಕೂ ಈ ಎರಡೂ ಹೋಟೆಲ್ ಗಳು ಖ್ಯಾತಿ. ಮೇಲಾಗಿ ಈ ಹೋಟೆಲ್‍ಗಳಿರುವುದು ನಗರದ ಪ್ರತಿಷ್ಠಿತ ಬಂಜಾರಹಿಲ್ಸ್ ಪ್ರದೇಶದಲ್ಲಿ!
ಅಂದಹಾಗೆ ಶಾಸಕರ ಎಲ್ಲಾ ಖರ್ಚುಗಳು ಕೊನೆಗೆ ಭಾರವಾಗುವುದು ಬಡ ಮತದಾರನ ಜೇಬಿಗೆ ಎಂಬಲ್ಲಿಗೆ ಈ ಹೋಟೆಲ್ ಪುರಾಣ ಮುಕ್ತಾಯ!












Click it and Unblock the Notifications