ಹುಬ್ಬಳ್ಳಿ-ಧಾರವಾಡ ಮೇಯರ್ ಆಯ್ಕೆಗೆ ಮುಹೂರ್ತ ನಿಗದಿ!
ಹುಬ್ಬಳ್ಳಿ, ಮೇ11: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕರ್ನಾಟಕದಲ್ಲಿಯೇ 2ನೇ ದೊಡ್ಡದಾದ ಮಹಾನಗರ ಪಾಲಿಕೆಯಾಗಿದೆ. ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಈಗ ಅಂತೂ ನೂತನ ಮೇಯರ್ ಆಯ್ಕೆಗೆ ಮುಹೂರ್ತ ಸಿದ್ದವಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದು 9 ತಿಂಗಳು ಕಳೆದಿದೆ. ಆದರೆ ಮೇಯರ್, ಉಪಮೇಯರ್ ಚುನಾವಣೆ ನಡೆದಿರಲಿಲ್ಲ. ಮೇ 28ಕ್ಕೆ ಹೊಸ ಮೇಯರ್, ಉಪಮೇಯರ್ ಚುನಾವಣೆ ನಡೆಸಲು ದಿನಾಂಕ ಘೋಷಣೆಯಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಮೂರು ಪಕ್ಷಗಳು ಸಹ ತಂತ್ರ ರೂಪಿಸುತ್ತಿವೆ. ಚುನಾವಣೆ ನಡೆದ 9 ತಿಂಗಳು ಕಳೆದರೂ ಅಧಿಕಾರವಿಲ್ಲದೇ ಸದಸ್ಯರು ಅತಂತ್ರರಾಗಿದ್ದು, ಕಾಂಗ್ರೆಸ್ ಪಕ್ಷ ಪ್ರತಿಭಟನೆ ಸಹ ಮಾಡಿತ್ತು.

ಬೆಳಗಾವಿಯ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಮೇಯರ್, ಉಪ ಮೇಯರ್ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಮಹಾನಗರ ಪಾಲಿಕೆಯ 21ನೇ ಅವಧಿಗೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆಯಲಿದೆ. ಮೇಯರ್ ಹುದ್ದೆ ಸಾಮಾನ್ಯ ವರ್ಗಕ್ಕೆ, ಉಪ ಮೇಯರ್ ಹುದ್ದೆ ಸಾಮಾನ್ಯ (ಮಹಿಳೆ)ಗೆ ಮೀಸಲಿಡಲಾಗಿದೆ.

ಮೇಯರ್ ಹುದ್ದೆ ಯಾರಿಗೆ ಒಲಿಯಲಿದೆ?, ಅವಳಿ ನಗರದ ಪಾಲಿಕೆ ಆಡಳಿತ ಯಾವ ಪಕ್ಷದ ಪಾಲಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications