ಬಿಎಸ್‌ವೈಗೆ ತಾಳ್ಮೆ ಇಲ್ಲ,ಅಧಿಕಾರ ಹೆಚ್ಚು ದಿನ ಇರೊಲ್ಲ : ಹೊರಟ್ಟಿ
ಹುಬ್ಬಳ್ಳಿ, ಜುಲೈ 26: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ತಾಳ್ಮೆ ಇಲ್ಲ, ಸರ್ಕಾರ ನಡೆಸುವುದು ಕಷ್ಟ ಎಂದು ಎಂಎಲ್‌ಸಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ತಾಳ್ಮೆ ಇತ್ತು ಅಧಿಕಾರ ನಡೆಸಿದ್ದಾರೆ, ಆದರೆ ಯಡಿಯೂರಪ್ಪ ಅವರಿಗೆ ತಾಳ್ಮೆಯೇ ಇಲ್ಲ ಹೇಗೆ ಅಧಿಕಾರ ನಡೆಸುತ್ತಾರೆ, ತುಂಬಾ ಕಷ್ಟವಿದೆ ಎಂದರು.
ಬಿಎಸ್ ಯಡಿಯೂರಪ್ಪ ಇಂದು(ಜುಲೈ 26)ರಂದು ಸಂಜೆ 6 ಗಂಟೆಗೆ ರಾಜ್ಯದ 26ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೂ ಬಹಳ ದಿನ ಸರ್ಕಾರ ನಡೆಯುವುದಿಲ್ಲ. ಸರ್ಕಾರ ಮಾಡೋದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ನುಡಿದರು.
ಅತೃಪ್ತ ಮೂರು ಶಾಸಕರನ್ನು ಅನರ್ಹ ಮಾಡಿದ್ದು, ಸರಿಯಾದ ಕ್ರಮ. ಸ್ಪೀಕರ್ ರಮೇಶ್ ಕುಮಾರ್ ಬಹಳ ವಿಚಾರಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ. ಇಂದು ಕಾಂಗ್ರೆಸ್ ಬಿಟ್ಟವರು ನಾಳೆ ಬಿಜೆಪಿ ಬಿಡಲ್ಲ ಎಂದು ಹೇಳಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರದಲ್ಲಿ ಬಹಳ ಜನ ಟ್ರಬಲ್ ಶೂಟರ್ ಇದ್ದರು. ಆದರೆ ಬಿಜೆಪಿಯಲ್ಲಿ ಟ್ರಬಲ್ ಕ್ರಿಯೇಟರ್ ಇದ್ದಾರೆ.
ಬಿಜೆಪಿಯವರು ಅತೃಪ್ತರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದಾರೆ. ಅತೃಪ್ತರನ್ನು ನಿಭಾಯಿಸುವುದು ಯಡಿಯೂರಪ್ಪಗೆ ಬಹಳ ಕಷ್ಟವಾಗುತ್ತದೆ. ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಕೊಡಲು ಸಾಧ್ಯವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲನೆ ಮಾಡಬೇಕಿತ್ತು. ಯಡಿಯೂರಪ್ಪ ಸರ್ಕಾರಕ್ಕೆ ಹೆಚ್ಚು ಆಯುಷ್ಯ ಇಲ್ಲ ಎಂದರು.












Click it and Unblock the Notifications