ಹುಬ್ಬಳ್ಳಿಯಲ್ಲಿ ಪಾಕಿಸ್ತಾನವನ್ನು ಗುಣಗಾನ ಮಾಡಿದ ಮುಸ್ಲಿಂ ಮೌಲ್ವಿ
ಹುಬ್ಬಳ್ಳಿ, ಡಿಸೆಂಬರ್ 4: ಇತ್ತೀಚೆಗೆ ಬೆಳಗಾವಿಯಲ್ಲಿ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಪಾಕಿಸ್ತಾನ ಸೈನ್ಯದ ಹಾಡವೊಂದನ್ನು ಹಾಕಿರುವ ಬೆನ್ನಲ್ಲಿಯೇ ಹುಬ್ಬಳ್ಳಿಯಲ್ಲಿ ಮುಸ್ಲಿಂ ಮೌಲ್ವಿಯೊಬ್ಬ ಪಾಕಿಸ್ತಾನವನ್ನು ಗುಣಗಾನ ಮಾಡಿದ್ದಾನೆ.
ಹುಬ್ಬಳ್ಳಿಯ ಗಣೇಶಪೇಟೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಈದ್ ಮಿಲಾದ್ ಕಾರ್ಯಕ್ರಮವೊಂದರಲ್ಲಿ ಮೌಲ್ವಿ ಅಬ್ದುಲ್ ಹಮೀದ್ ಖೈರಾತಿ ಮಾತನಾಡಿ, "ಪಾಕಿಸ್ತಾನ ನೋಡಬೇಕೆಂದರೆ ಅಲ್ಲಿಗೇ ಹೋಗುವ ಅವಶ್ಯಕತೆ ಇಲ್ಲ. ಈ ಗಣೇಶಪೇಟೆ ನನಗೆ ಪಾಕಿಸ್ತಾನದಂತೆಯೇ ಕಾಣುತ್ತಿದೆ" ಎಂದು ಹೇಳಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಈ ಮೌಲ್ವಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ ಉತ್ತರ ಎಸಿಪಿ ದಾವೂದ್ ಖಾನ್ ಹಾಗೂ ಶಹರ ಠಾಣೆ ಇನ್‌ಸ್ಪೆಕ್ಟರ್ ಶಿವಾನಂದ ಚಲವಾದಿ ಅವರ ಸಮ್ಮುಖದಲ್ಲೇ ಮೌಲ್ವಿ ಈ ರೀತಿಯ ಹೇಳಿಕೆ ನೀಡಿದ್ದು, ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ದಾವೂದ್ ಖಾನ್ ಅವರು, ಮೌಲ್ವಿ ಖೈರಾತಿ ನೀಡಿದ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ನಾನು ಇನ್‌ಸ್ಪೆಕ್ಟರ್ ಜತೆ ಮಾತುಕತೆಯಲ್ಲಿ ತೊಡಗಿದ್ದ ವೇಳೆ ಅವರು ಆ ಮಾತುಗಳನ್ನಾಡಿರಬಹುದು ಎಂದಿದ್ದಾರೆ.
ದೇಶದಲ್ಲಿ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿದೆ. ಆದರೆ, ದೇಶದ ವಿರುದ್ಧ ಹೇಳಿಕೆ ನೀಡುವುದನ್ನು ಸಹಿಸಲಾಗದು. ದೇಶದ ಗೌರವಕ್ಕೆ ಚ್ಯುತಿ ಬರುವಂತಹ ಹೇಳಿಕೆಯನ್ನು ಯಾರೇ ನೀಡಿದ್ದರೂ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.












Click it and Unblock the Notifications