ನೇಹಾ ಕೊಲೆ ಕೇಸ್ ಸಿಐಡಿಗೆ ಹಸ್ತಾಂತರ: ಇಂದು ಫಯಾಜ್ ವಶಕ್ಕೆ
ಧಾರವಾಡ, ಏಪ್ರಿಲ್ 24: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಭೀಕರವಾಗಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಇದರ ಬೆನ್ನಲ್ಲೆ ಪೊಲೀಸರಿಂದ ತನಿಖಾ ಕಡತಗಳನ್ನು ವಶಕ್ಕೆ ಪಡೆದಿರುವ ಸಿಐಡಿ ತಂಡ ಕಾರ್ಯಪ್ರವೃತ್ತವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಆರಂಭವಾಗಿದ್ದು, ಅಧಿಕಾರಿಗಳು ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಪೊಲೀಸ್ ವಶದಲ್ಲಿರುವ ಆರೋಪಿ ಫಯಾಜ್ ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಸದ್ಯ ಈ ಫಯಾಜ್ ಧಾರವಾಡದ ಕೇಂದ್ರ ಕಾರಾಗೃಹದಲ್ಲಿದ್ದಾನೆ.

ಪ್ರಕರಣದ ಕುರಿತು ಪೊಲೀಸರಿಂದ ಎಲ್ಲ ಮಾಹಿತಿ ಮತ್ತು ತನಿಖೆ ಕಡತ ಪಡೆದ ಸಿಐಡಿ ಅಧಿಕಾರಿಗಳು ಆರೋಪಿ ವಶಕ್ಕೆ ಪಡೆಯುತ್ತಿದ್ದಂತೆ ಹೆಚ್ಚಿನ ತನಿಖೆ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬಿವಿಬಿ ಕ್ಯಾಂಪಸ್ ಮಹಜರು
ಈಗಾಗಲೇ ಮಂಗಳವಾರ ಸಿಐಡಿ ಅಧಿಕಾರಿಗಳು ಹುಬ್ಬಳ್ಳಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಪ್ರಕರಣ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಪೊಲೀಸ್ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಪ್ರಕರಣ ಸಮಗ್ರ ವರದಿ ಪಡೆದಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಅವರು ಬಿವಿಬಿ ಕ್ಯಾಂಪಸ್‌ನಲ್ಲಿ ಮಂಗಳವಾರ ಮಹಜರು ಮಾಡಿದ್ದಾರೆ.
ಕೊಲೆ ನಡೆದ ಸ್ಥಳವನ್ನು ಪರಿಶೀಲಿಸಿದ್ದಾರೆ. ಇಡಿ ಕ್ಯಾಂಪಸ್ ನಲ್ಲಿ ಸುತ್ತಾಡಿ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ತನಿಖೆಯ ಎಲ್ಲ ಮಾಹಿತಿ, ಸಾಕ್ಷ್ಯಾಧಾರಗಳನ್ನು ಸೇರಿದಂತೆ ಆರೋಪಿಯನ್ನು ಸಿಐಡಿ ಅಧಿಕಾರಿಗಳಿಗೆ ಒಪ್ಪಿಸಿ ಸಹಕರಿಸಲಿದ್ದಾರೆ.

ರಾಜ್ಯಾದ್ಯಂತ ಪ್ರತಿಭಟನೆ
ಕಾಂಗ್ರೆಸ್ ಕಾರ್ಪೋರೇಟರ್ ಮಗಳಾದ ನೇಹಾ ಕೊಲೆ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಹತ್ಯೆಯು ಲವ್ ಜಿಹಾದ್‌ಗಾಗಿ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ವಿದ್ಯಾರ್ಥಿ ಸಂಘಟನೆ, ಮಠಾಧೀಶರು, ರಾಜಕಾರಣಿಗಳು ಸೇರಿದಂತೆ ಅನೇಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ನ್ಯಾಯ ಒದಗಿಸಿ ಕೊಟ್ಟು ಅಗಲಿದ ಆತ್ಮಕ್ಕೆ ಶಾಂತಿ ನೀಡುವಂತೆ ಪ್ರತಿಭಟಿಸಿದ್ದರು.
ಕೊಲೆ ಆರೋಪಿ 6 ದಿನಗಳು ಸಿಐಡಿ ವಶಕ್ಕೆ
ನೇಹಾ ಕೊಲೆ ಪ್ರಕರಣದ ತನಿಖೆ ಕೈಗೊಂಡಿರುವ ಸಿಐಡಿ ಅಧಿಕಾರಿಗಳು, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಫಯಾಜ್‌ನನ್ನು ಬುಧವಾರ ತಮ್ಮ ವಶಕ್ಕೆ ಪಡೆದಿದರು.
ಮಂಗಳವಾರದಿಂದ ತನಿಖೆ ಆರಂಭಿಸಿರುವ ಎಸ್‌ಪಿ ವೆಂಕಟೇಶ್ ನೇತೃತ್ವದ ತಂಡ, ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಲ್ಲಿನ ಒಂದನೇ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅವರ ಅರ್ಜಿ
ಪುರಸ್ಕರಿಸಿದ ನ್ಯಾಯಾಲಯ 06 ದಿನ ಆರೋಪಿಯನ್ನು ಸಿಐಡಿಗೆ ಒಪ್ಪಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications