Neha Hiremath Murder Case: ನಮಗೆ ಲವ್ ಜಿಹಾದ್ ಅನಿಸುತ್ತಿದೆ, ನೀವ್ಯಾಕೆ ಇಲ್ಲಾ ಅಂತೀರಾ?: ಪ್ರಶ್ನೆ ಮಾಡಿದ್ಯಾರು & ಯಾರಿಗೆ?
ಚಾಮರಾಜನಗರ, ಏಪ್ರಿಲ್, 22: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹೀರೆಮಠ ಹತ್ಯೆ ಪ್ರಕರಣದ ಆರೋಪಿಗೆ ಗಲ್ಲು ಶಿಕ್ಷೆ ನೀಡಬೇಕು ಎನ್ನುವ ಕೂಗುಗಳು ಜೋರಾಗಿ ಕೇಳಿಬರುತ್ತಿವೆ. ಇನ್ನು ಚಾಮರಾಜನಗರದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಎನ್.ಮಹೇಶ್, ನಮಗೆ ಲವ್ ಜಿಹಾದ್ ಅನ್ನಿಸುತ್ತಿದೆ. ತನಿಖೆಗೂ ಮುನ್ನವೇ ನೀವ್ಯಾಕೆ ಇಲ್ಲ ಅಂತಿದ್ದೀರಾ? ಎಂದು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಸ್ತೆತಡೆ ನಡೆ ಪ್ರತಿಭಟನೆ ವೇಳೆ ಮಾತನಾಡಿದ ಅವರು, ನ್ಯಾಯಬದ್ಧವಾಗಿ ಮಾತನಾಡಿ, ಒಂದು ಸಮುದಾಯದ ಓಲೈಕೆ ಯಾಕೆ ಮಾಡುತ್ತೀರಿ. ಚುನಾವಣಾ ಪ್ರಚಾರ ಬಿಟ್ಟು ಪ್ರತಿಭಟನೆ ನಡಸಬೇಕಾಗಿರುವುದು ನಮ್ಮ ದೌರ್ಭಾಗ್ಯ ಎಂದು ಆಕ್ರೊಶ ಹೊರಹಾಕಿದರು.

ಪ್ರಧಾನಿ ನರೇಂದ್ರ ಮೋದಿ ಪರವಾಗಿ ಹಾಡು ಹಾಡಿದ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಯಾವ ರೀತಿ ಕಾನೂನು ಸುವ್ಯವಸ್ಥೆ ಇದು, ಮತದಾರರ ಬಳಿ ಈ ವಿಚಾರ ತೆಗೆದುಕೊಂಡು ಹೋಗುತ್ತೇವೆ. ಮತದಾರರೇ ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ಹರಿಹಾಯ್ದರು. ಇನ್ನು, ರಸ್ತೆತಡೆ ನಡೆಸಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ.
ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ: ನೇಹಾ ಹಿರೇಮಠ್ ಹತ್ಯೆ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಅಲ್ಲದೆ ಇದೇ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕೆಂಡಕಾರುತ್ತಿದ್ದಾರೆ. ಇದೀಗ ಎಂ.ಪಿ.ರೇಣುಕಾರ್ಯ ಅವರು ಪ್ರತಿಕ್ರಿಯಿಸಿ, ವಿವಾದಾತ್ಮಕ ಹೇಳಿಯೊಂದನ್ನು ನೀಡಿದ್ದಾರೆ. ಹಾಗಾದರೆ ಆ ಹೇಳಿಕೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
"ಹಿಂದೂ ಯುವತಿಯರ ಕಗ್ಗೊಲೆ ಮುಂದುವರೆದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅಮಾನವೀಯವಾಗಿ ಹತ್ಯೆ ಮಾಡಲಾಗಿದೆ. ಲವ್ ಜಿಹಾದ್‌ಗಾಗಿ ನಡೆದಿರುವ ಹತ್ಯೆ ಇದು. ನಿಮ್ಮ ಕೈಯಲ್ಲಿ ಆಗದಿದ್ದರೆ ಮುಂಬರುವ ದಿನಗಳಲ್ಲಿ ನಾವು ಎನ್‌ಕೌಂಟರ್ ಮಾಡಬೇಕಾಗುತ್ತದೆ," ಎಂದು ಮಾಜಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನೇಹಾ ಹತ್ಯೆ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. 2013ರಲ್ಲಿ ನೀವು ಅಧಿಕಾರಕ್ಕೆ ಬಂದಾಗ ನೂರಾರು ಹಿಂದೂಗಳ ಹತ್ಯೆಯಾಯಿತು. ಲವ್ ಜಿಹಾದ್ ಹೆಸರಿನಲ್ಲಿ ನೇಹಾ ಹಿರೇಮಠ್ ಕೊಲೆಯಾಗಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾರ್ವಜನಿಕರು, ಹಿಂದೂ ಸಂಘಟನೆಗಳು ರಾಜ್ಯದುದ್ದಕ್ಕೂ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ ಎಂದರು.
ಇದೊಂದು ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿದೆ ಎಂಬ ಉಡಾಫೆ ಹೇಳಿಕೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ್ದಾರೆ. ನಾವು ಇದನ್ನು ಖಂಡಿಸುತ್ತೇವೆ. ಕೊಲೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಆರೋಪ ಮಾಡಿರುವುದು ಶುದ್ಧ ಸುಳ್ಳು. ಮೊಸರಿನಲ್ಲಿ ಕಲ್ಲು ಹುಡುಕುವುದಿಲ್ಲ ಎಂದು ಹೇಳಿದರು.
ಹಿಂದೂ ವಿರೋಧಿ ನೀತಿ ಕೈ ಬಿಡಿ, ಹಿಂದೂ ವಿದ್ಯಾರ್ಥಿನಿಯರನ್ನು ಹತ್ಯೆ ಮಾಡಿದವರನ್ನು ಗಲ್ಲಿಗೇರಿಸಿ. ಇಲ್ಲವೇ ಎನ್‌ಕೌಂಟರ್ ಮಾಡಿ. ಇದೇ ರೀತಿ ಮುಂದುವರೆದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ. ನಾವೇನು ಕೈಯಲ್ಲಿ ಬಳೆ ತೊಟ್ಟಿಲ್ಲ. ನಮಗೂ ರೋಷ ಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಗ್ದ ವಿದ್ಯಾರ್ಥಿನಿ ಕುಟುಂಬ ಕಣ್ಣೀರು ಹಾಕಿದೆ. ಪ್ರತಿಯೊಬ್ಬ ಹಿಂದೂಗಳು ಇದನ್ನು ಖಂಡಿಸಿದ್ದು, ಮುಂದೆಯೂ ಇಂಥ ಘಟನೆಗಳು ಮರುಕಳಿಸಿದರೆ ನಾವು ಗಾಂಧಿ ತತ್ವ ಹೊಂದಿಲ್ಲ. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಆಗಲೇಬೇಕು. ಜಿಹಾದಿಗಳ, ಕೊಲೆಗಾರರನ್ನು ಹತ್ತಿಕ್ಕಲು ಆಗದಿದ್ದರೆ ರಾಜೀನಾಮೆ ಕೊಡಿ ಎಂದು ಕಾಂಗ್ರಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications