Actress Harshika Poonacha: ಪ್ರಹ್ಲಾದ್ ಜೋಶಿ ಭೇಟಿಯಾಗಿ ಧನ್ಯವಾದ ತಿಳಿಸಿದ ನಟಿ ಹರ್ಷಿಕಾ ದಂಪತಿ: ಸಚಿವರ ಅಭಯ
ಹುಬ್ಬಳ್ಳಿ, ಏಪ್ರಿಲ್ 24: ಬೆಂಗಳೂರಿನ ಫ್ರೆಜರ್ ಟೌನ್‌ನಲ್ಲಿ ನಡೆದ ದೌರ್ಜನ್ಯ ಘಟನೆ ಬಳಿಕ ನಟಿ ಹರ್ಷಿಕಾ ಪೂರ್ಣಚ್ಚ ಮತ್ತು ಭುವನ್ ಪೊನ್ನಣ್ಣ ದಂಪತಿ ಬುಧವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿದರು. ಸೂಕ್ತ ಕ್ರಮಕ್ಕೆ ಮನವಿ ಮಾಡಿದರು. ಚುನಾವಣೆ ಮುಗಿಯುತ್ತಿದ್ದಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಜೋಶಿಯವರು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.
ಹುಬ್ಬಳ್ಳಿಗೆ ಆಗಮಿಸಿದ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು ಕೇಂದ್ರ ಸಚಿವರ ಜೊತೆ ಮಾತುಕತೆ ನಡೆಸಿದರು. ಘಟನೆ ದಿನ ನಡೆದ ಸಂಗತಿಯನ್ನು ಅವರು ವಿವರಿಸಿದರು. ದಂಪತಿ ಜೊತೆ ನಾವಿದ್ದೇವೆ ಎಂದು ಜೋಶಿಯವರು ಧೈರ್ಯ ತುಂಬಿದರು.

ಕಾಂಗ್ರೆಸ್ ಮಾವೋವಾದಿ ದೇಶ ಮಾಡಲು ಯತ್ನ
ಕಾಂಗ್ರೆಸ್‌ನ ರಾಹುಲ್ ಗಾಂಧಿ ಭಾಷಣ ನೋಡಿದರೆ, ಕಾಂಗ್ರೆಸ್ ಮ್ಯಾನಿಫ್ಯಾಸ್ಟೋ ದೇಶವನ್ನು ಮಾವೋವಾದಿ ದೇಶ ಮಾಡಲು ಹೊರಟಂತಿದೆ. ಜನರ ಬಳಿ ಎರಡು ಬೈಕ್, ಮನೆ ಇದ್ದರೆ ಒಂದನ್ನು ಕಾಂಗ್ರೆಸ್‌ನವರು ಕಸಿದುಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ವೆಲ್ತ್ ಕ್ರಿಯೇಟ್ ಮಾಡುವವರ ವಿರುದ್ಧ ಹೊರಟಿದೆ ಎಂದು ಜೋಶಿಯವರು ಕಿಡಿ ಕಾರಿದರು.
ಮಾವೋವಾದಿ ಮನಸ್ಥಿತಿ ಇಟ್ಟುಕೊಂಡು ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ. ಇನ್ನು ಫೇಲ್ ಆಗಿರುವ ಮಾವೋವಾದಿ ವಿಚಾರದ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್‌ನವರು ತುಷ್ಟೀಕರಣದ ಪರಾಕಾಷ್ಟೆ ತಲುಪುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನೇಹಾ ಕುಟುಂಬಕ್ಕೆ ಸಾಂತ್ವನ: ನಟಿ
ಇದೇ ವೇಳೆ ಮಾತನಾಡಿದ ನಟಿ ಹರ್ಷಿಕಾ ಪೂರ್ಣಚ್ಚ ಅವರು, ನಾವು ಹುಬ್ಬಳ್ಳಿಯಗೆ ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ. ನಮಗೆ ಆದ ತೊಂದರೆಗೆ ಪ್ರಹ್ಲಾದ್ ಜೋಶಿಯವರು ಸ್ಪಂದಿಸಿದ್ದರು. ಹೀಗಾಗಿ ಅವರಿಗೂ ಧನ್ಯವಾದ ತಿಳಿಸಿದ್ದೇವೆ ಎಂದರು.

ನಮ್ಮ ಕುಟುಂಬ ಯಾರ ತಂಟೆಗೂ ಹೋಗದೆ ನಮ್ಮ ಪಾಡಿಗೆ ನಾವಿದ್ದೇವೆ. ಮೊನ್ನೆ ರೆಸ್ಟೋರೆಂಟ್‌ಗೆ ಹೋದಾಗ ಕೆಲವರು ತೊಂದರೆ ಮಾಡಿದ್ದಾರೆ. ಕನ್ನಡ ಮಾತಾಡಿದ್ದಕ್ಕೆ ನಮ್ಮ ಜೊತೆ ಜಗಳ ತೆಗೆದಿದ್ದಾರೆ. ಸಾಕಷ್ಟು ಜನರು ಕೂಡಿಸಿಕೊಂಡು ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ. ನಮ್ಮ ಚಿನ್ನದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದರು. ಸೆಲೆಬ್ರಿಟಿಗಳಿಗೆ ಹೀಗಾದರೆ ಜನಸಾಮಾನ್ಯರ ಗತಿಯೇನು ಎಂದು ಅವರು ಪ್ರಶ್ನಿಸಿದರು.
ಸಚಿವರ ಭೇಟಿಯಿಂದ ಧೈರ್ಯ: ಭುವನ್
ನಟಿ ಪತಿ ನಟಿ ಭುವನ್ ಅವರು ಪ್ರತಿಕ್ರಿಯಿಸಿ, ನಮ್ಮ ಮೇಲಿನ ದೌರ್ಜನ್ಯ ಪ್ರಕರಣವನ್ನು ಪ್ರಹ್ಲಾದ್ ಜೋಶಿಯವರ ಗಮನಕ್ಕೆ ತಂದಿದ್ದೇವೆ. ಆದ ತೊಂದರೆಯನ್ನು ತಿಳಿಸಿದ್ದೇವೆ. ಚುನಾವಣೆ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರನ್ನು ಭೇಟಿಯಾದ ಬಳಿಕ ನಮಗೆ ಮತ್ತಷ್ಟು ಧೈರ್ಯ ಬಂದಿದೆ ಎಂದರು.
ಸದ್ಯ ಪ್ರಕರಣವನ್ನು ಬೆಂಗಳೂರು ಪೊಲೀಸರು ಸಮರ್ಪಕ ತನಿಖೆ ಮಾಡುತ್ತಿದ್ದಾರೆ. ಆರೋಪಿಗಳನ್ನು ಗುರುತಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.












Click it and Unblock the Notifications