ನೇಹಾ ಕೊಲೆ: ಫಯಾಜ್ ಜೈಲಲ್ಲಿದ್ದರೂ ಆತನ ಮೊಬೈಲ್‌ನಲ್ಲಿದ್ದ ಫೋಟೋ ಲೀಕ್ ಆಗಿದ್ದೇಗೆ?: ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಏಪ್ರಿಲ್ 23: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಬಳಿಕ ಬಂಧನವಾದ ಆರೋಪಿ ಫಯಾಜ್ ಜೈಲಿನಲ್ಲಿರುವಾಗಲೇ ಆತನ ಮೊಬೈಲ್‌ನಲ್ಲಿನ ಫೋಟೋಗಳು ಲೀಕ್ ಆಗಿವೆ. ಕಾಂಗ್ರೆಸ್ ಸರ್ಕಾರದಿಂದಲೇ ಈ ಕೆಲಸ ನಡೆದಿದೆ ಎಂದು ಕೇಂದ್ರ ಸಚಿವ ಮತ್ತು ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಆರೋಪಿಸಿದರು.
ನೇಹಾ ಹತ್ಯೆ ಬಳಿಕ ಮೃತ ನೇಹಾ ಮತ್ತು ಆರೋಪಿ ಫಯಾಜ್ ಒಟ್ಟಿಗೆ ಇದ್ದ ಕೆಲವು ಫೋಟೊಗಳು ಆನ್‌ಲೈನ್‌ನಲ್ಲಿ ಹರಿದಾಡಿದವು. ಈ ಕುರಿತು ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಆರೋಪಿ ಜೈಲಲ್ಲಿ ಇರೋವಾಗ ಮೊಬೈಲ್ ಫೋಟೋ ಲೀಕ್ ಆಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ನೇಹಾ ಕುಟುಂಬದ ಬೇಡಿಕೆಯಂತೆ ತನಿಖೆ ನಡೆಸಲಿ. ನೇಹಾ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸಲಿಲ್ಲ. ನಿರಂಜನ್ ಹಿರೇಮಠ ಅವರ ಕುಟುಂಬದ ಬೇಡಿಕೆಯಂತೆ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ನೇಹಾ ಹತ್ಯೆ ಪ್ರಕರಣದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಹುಡುಗಿ ಮೇಲೆ ಹಲ್ಲೆ ನಡೆದಿದೆ. ಮತಾಂತರಕ್ಕೆ ಒಪ್ಪದಿದ್ದಾಗ ಯುವತಿಯನ್ನು ಮನಬಂದಂತೆ ಥಳಿಸಿದ್ದಾರೆ ಎಂದು ಅವರು ತಿಳಿಸಿದರು.
ಹಿಂದೂ ನೆಲೆಗಟ್ಟಿನ ಹುಬ್ಬಳ್ಳಿಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಹಿಂದೂ ನೆಲೆಗಟ್ಟಿನ, ಹಿಂದೂ ಸಮಾಜ-ಸಂಘಟನೆ ಗಟ್ಟಿಯಾಗಿರುವ ಹುಬ್ಬಳ್ಳಿ ನೆಲದಲ್ಲೇ ಪರಿಸ್ಥಿತಿ ಹೀಗಿದೆ. ಇನ್ನು ರಾಜ್ಯದ ಬೇರೆಡೆ ಸ್ಥಿತಿ ಏನಾಗಿರಬೇಡ? ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ತುಷ್ಟಿಕರಣ ರಾಜಕಾರಣ ಮಾಡುತ್ತಿದೆ. ಹೀಗೆ ತುಷ್ಟಿಕರಣ ಮಾಡುವವರನ್ನು ಮೊದಲು ಅಧಿಕಾರದಿಂದ ಕಿತ್ತೊಗೆಯ ಬೇಕು. ಇಲ್ಲದಿದ್ದರೆ ನಮ್ಮ ಮನೆಗಳಲ್ಲೂ ನಾವು ಹಿಂದೂ ಧರ್ಮ-ಸಂಸ್ಕೃತಿ ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಅವರು ಎಚ್ಚರಿಕೆ ಕೊಟ್ಟರು.
ಕರ್ನಾಟಕದಲ್ಲಿ ಈ ಆಡಳಿತ ಕಾಂಗ್ರೆಸ್ ಸರ್ಕಾರ ಖಜಾನೆ ಲೂಟಿ ಮಾಡಿದೆ. ಸರ್ಕಾರ ಪಾಪರ್ ಆಗಿದೆ. ಬರ ಪರಿಹಾರದಲ್ಲಿ ಕಾಂಗ್ರೆಸ್ ಪಕ್ಷ ರಾಜಕಾರಣ ಮಾಡುತ್ತಿದೆ. ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೆ ಚುನಾವಣೆ ಆಯೋಗದ ಅನುಮತಿ ಕೇಳಿದೆ. ಅದನ್ನು ಅವರಿಗೆ ತಿಳಿಸಲಾಗಿದೆ. ಆದರೆ, ಎಲ್ಲಾ ನಾವೇ ಕೊಡುವುದಾದರೆ ಇಲ್ಲಿ ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ? ಎಂದರು.
ಈ ಹಿಂದೆ ಬಿಜೆಪಿಯ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕೇಂದ್ರದ ಅನುದಾನ ಕಾಯದೆ, 15000, 20000 ಬರ ಪರಿಹಾರ ನೀಡಿದ್ದಾರೆ. ಆದರೆ ನೀವೇನು ಮಾಡಿದ್ದೀರಿ ಸಿದ್ದರಾಮಯ್ಯ ಅವರೇ? ರೈತರಿಗೆ ಬರೀ 2000 ಕೊಟ್ಟು ಕೈ ತೊಳೆದುಕೊಂಡಿದ್ದೀರಿ ಎಂದು ಅವರು ವಿವರಿಸಿದರು.
ಕೇಂದ್ರ ಸರ್ಕಾರ ತಾರತಮ್ಯ ಮಾಡದೇ ಎಲ್ಲ ರಾಜ್ಯಗಳನ್ನು ಒಂದೇ ರೀತಿಯಾಗಿ ನೋಡಿಕೊಂಡಿದೆ. ಕಾಗ್ರೆಸ್ ಪಕ್ಷ ಇದರಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರದ ನಡೆ ಸಮರ್ಥಿಸಿಕೊಂಡರು. 900 ಕೋಟಿ ಮುಂಗಡ ಕೇಂದ್ರ ಸರ್ಕಾರ ಬರ ಪರಿಹಾರಕ್ಕಾಗಿ ರಾಜ್ಯಕ್ಕೆ ಮುಂಗಡವಾಗಿಯೇ 900 ಕೋಟಿ ರು. ಬಿಡುಗಡೆ ಮಾಡಿದೆ. ಯುಪಿಎ ಅವಧಿಗಿಂತ ಹೆಚ್ಚೇ ಅನುದಾನವನ್ನು ನಾವು ನೀಡಿದ್ದೇವೆ ಎಂದು ಎಂದು ಜೋಶಿಯವರು ಲೆಕ್ಕ ಕೊಟ್ಟರು.
ಬಿ.ಎಸ್ ಯಡಿಯೂರಪ್ಪ ನೀಡಿದಂತೆ ನಿಮ್ಮಿಂದೇಕೆ ಸಾಧ್ಯವಾಗಿಲ್ಲ?. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕೇಂದ್ರದಿಂದ ಬರದಿದ್ದರೂ ಹೆಚ್ಚು ಬರ ಪರಿಹಾರ ನೀಡಲಾಗಿದೆ. ಈಗ ನಿಮ್ಮಿಂದೇಕೆ ಸಾಧ್ಯವಾಗುತ್ತಿಲ್ಲ? ಎಂದು ಕಿಡಿ ಕಾರಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಏ.28 ರಂದು ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಈ ಭಾಗದಲ್ಲೂ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.












Click it and Unblock the Notifications