ಸಿಎಂ ಬದಲಾವಣೆ ಚರ್ಚೆ: ಕಾಂಗ್ರೆಸ್ ಗೊಂದಲದ ಗೂಡು ಎಂದ ಬಿಜೆಪಿ ಶಾಸಕ
ಹುಬ್ಬಳ್ಳಿ, ಡಿಸೆಂಬರ್ 07: ಇತ್ತೀಚಿಗೆ ನಡೆದ ಚನ್ನಪಟ್ಟಣ ಉಪಚುನಾವಣೆ, ಶಿಗ್ಗಾಂವಿ ಉಪಚುನಾವಣೆ ಹಾಗೂ ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಸಾಧಿಸಿದೆ. ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಮತ್ತಷ್ಟು ಗಟ್ಟಿಯಾಗಿದೆ. ಆದರೆ ಉಪಚುನಾವಣೆ ಮುಗಿದ ಬಳಿಕ ಮತ್ತೆ ರಾಜ್ಯದಲ್ಲಿ ಸಿಎಂ ಬದಲಾವಣೆ, ಅಧಿಕಾರ ಹಸ್ತಾಂತರ ಎನ್ನುವ ಸುದ್ದಿಗಳು ಹರಿದಾಡುತ್ತಿದೆ.
ಮುಡಾ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡುತ್ತಾರಾ ಎನ್ನುವ ಪ್ರಶ್ನೆ ಕೂಡ ಇದೆ. ಆದರೆ ಕಾಂಗ್ರೆಸ್‌ನ ಪ್ರಬಲ ನಾಯಕರು ಈ ಚರ್ಚೆಯನ್ನು ತಳ್ಳಿ ಹಾಕುತ್ತಿದ್ದು, ಸದ್ಯಕ್ಕೆ ಅಧಿಕಾರ ಹಸ್ತಾಂತರದ ಪ್ರಸ್ತಾಪವಿಲ್ಲ. ಯಾವುದೇ ಸಮಸ್ಯೆ ಇಲ್ಲದೆ ನಮ್ಮ ಸರ್ಕಾರ ಅಧಿಕಾರ ಅವಧಿ ಪೂರ್ಣಗೊಳಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹೀಗಿದ್ದರೂ ಕೆಲ ಶಾಸಕ ಹಾಗೂ ಸಚಿವರ ಹೇಳಿಕೆ ಸಿಎಂ ಬದಲಾವಣೆ ಚರ್ಚೆಯ ಬಗ್ಗೆ ಅನುಮಾನ ಹುಟ್ಟುಹಾಕುತ್ತಿದೆ.

ಈ ಬಗ್ಗೆ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಪ್ರತಿಕ್ರಿಯಿಸಿದ್ದು, ಸಿಎಂ ಬದಲಾವಣೆ ಕಾಂಗ್ರೆಸ್ಸಿನ ಆಂತರಿಕ ವಿಚಾರ ನಿಜ ಆದರೆ, ಇದು ದೊಡ್ಡಮಟ್ಟದ ಗೊಂದಲವನ್ನು ಹುಟ್ಟು ಹಾಕಿದೆ. ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್, ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ನೋಡಿದರೆ ನಿಜಕ್ಕೂ ಬಹು ದೊಡ್ಡ ಗೊಂದಲ ಸೃಷ್ಟಿಸಿರುವುದು ನಿಜ ಎಂದು ಎಂದರು.
ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ಬಗ್ಗೆ ಒಪ್ಪಂದ ಆಗಿದೆಯೋ ಇಲ್ಲವೋ ಅದು ಅವರಿಗೆ ಗೊತ್ತು. ಆದರೆ ಸಿಎಂ ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಸಿಎಂ ಅಂತಾರೇ. ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ ಅವರು ಒಪ್ಪಂದದ ಬಗ್ಗೆ ಮತ್ತೊಂದು ರೀತಿಯಲ್ಲಿ ಮಾತನಾಡುತ್ತಾರೆ. ಇದೆಲ್ಲಾ ನೋಡಿದರೇ ನಿಜಕ್ಕೂ ಕಾಂಗ್ರೆಸ್ ಗೊಂದಲದ ಗೂಡಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಲೇವಡಿ ಮಾಡಿದರು.
ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮೂರು ಉಪಚುನಾವಣೆ ಗೆದ್ದರೇ, ಜಗತ್ತನೇ ಗೆದ್ದಿರುವ ರೀತಿಯಲ್ಲಿ ಯಾವ ಪುರುಷಾರ್ಥಕ್ಕೆ ಸಮಾವೇಶ ಮಾಡುತ್ತಿದ್ದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಮಹಾರಾಷ್ಟ್ರ ಸೇರಿದಂತೆ ರಾಷ್ಟ್ರದ ಬಹುತೇಕ ಕಡೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಿದೆ ಎಂಬುವುದನ್ನು ಅರಿತುಕೊಳ್ಳಬೇಕಿದೆ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.












Click it and Unblock the Notifications