ಮದ್ಯ ಮುಕ್ತ ಗ್ರಾಮಕ್ಕೆ ಮಹಿಳೆಯರ ಪಟ್ಟು: ನೆಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಹಾವೇರಿ, ಜನವರಿ 16: ಇತ್ತೀಚಿನ ದಿನದಲ್ಲಿ ಜನರು ಮಧ್ಯ ಸೇವಿಸಿ, ಪಾರ್ಟಿ ಮಾಡಿ ಸಂತೋಷ ವ್ಯಕ್ತಪಡಿಸುತ್ತಾರೆ. ಕೆಲವರು ಅದನ್ನೇ ಚಟವಾಗಿಸಿಕೊಂಡು ಪ್ರತಿ ನಿತ್ಯ ಮದ್ಯಪಾನ ಮಾಡಿ ಕುಟುಂಬವನ್ನು ಬೀದಿಗೆ ತಳ್ಳುತ್ತಾರೆ. ಮದ್ಯಪಾನವನ್ನೇ ಚಟವಾಗಿಸಿಕೊಂಡ ಕೆಲವು ವ್ಯಕ್ತಿಗಳಿಗೆ ಹಾವೇರಿ ಜಿಲ್ಲೆಯ ನೆಗಳೂರು ಗ್ರಾಮದ ಮಹಿಳೆಯರು ಶಾಕ್ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ನೆಗಳೂರು ಗ್ರಾಮದಲ್ಲಿ ಸೋಮವಾರ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಈ ಗ್ರಾಮದಲ್ಲಿ ಎಷ್ಟೋ ಕುಟುಂಬ ಅಂದೇ ದುಡಿದು, ಅಂದೇ ಊಟ ಮಾಡುವ ಪರಿಸ್ಥಿತಿ ಇದೆ. ಆದರೆ ಈ ಗ್ರಾಮದ ಕೆಲವು ಗಂಡಸರು ದುಡಿದ ಹಣವನ್ನು ಮದ್ಯಕ್ಕಾಗಿ ಖರ್ಚು ಮಾಡುತ್ತಿದ್ದಾರೆ.
ಇದರಿಂದ ಆಕ್ರೋಶಗೊಂಡ ಮಹಿಳೆಯರು ನೆಗಳೂರು ಗ್ರಾಮದಲ್ಲಿರುವ ಎಮ್‌ಎಸ್‌ಐಎಲ್ ಮದ್ಯದಂಗಡಿ ಮುಂದೆ ಮಹಾತ್ಮ ಗಾಂಧೀಜಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರ ಇರಿಸಿ ಪ್ರತಿಭಟನೆ ನಡೆಸಿ ಬೀಗ ಹಾಕಿದ್ದಾರೆ.

ಮದ್ಯದ ಚಟಕ್ಕೆ ಬಿದ್ದು ಎಷ್ಟೋ ಪರಿವಾರಗಳು ಈ ಗ್ರಾಮದಲ್ಲಿ ಬೀದಿಗೆ ಬಂದಿವೆ. ಈ ಹಿನ್ನಲೆಯಲ್ಲಿ ನೆಗಳೂರು ಗ್ರಾಮವನ್ನು ಮದ್ಯ ಮುಕ್ತ ಮಾಡಲು ಗ್ರಾಮದ ಮಹಿಳೆಯರು ಪಣತೊಟ್ಟು ಬೃಹತ್ ಪ್ರತಿಭಟನೆ ನಡೆಸಿದರು. ನೆಗಳೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಸೇರಿ ಮದ್ಯದಂಗಡಿ ಮುಚ್ಚುಯುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು.
ಎಷ್ಟೋ ಬಾರಿ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರು ಸ್ಪಂದಿಸಿಲ್ಲವಂತೆ. ಈ ಕಾರಣ ಆಕ್ರೋಶಗೊಂಡ ಮಹಿಳೆಯರು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿ ಪ್ರತಿಭಟನೆ ನಡೆಸಿದರು. ಈ ಮಹಿಳೆಯರ ಪ್ರತಿಭಟನೆಗೆ ನಗಳೂರು ಗ್ರಾಮ ಪಂಚಾಯತ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ಶಾಲಾ ಮಕ್ಕಳು ಸೇರಿದಂತೆ ಅನೇಕರು ಸಾಥ್ ನೀಡಿದರು. ಇತ್ತ ನೆಗಳೂರು ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಗುತ್ತಲ ಪೊಲೀಸರು ಭೇಟಿ ನೀಡಿ ಮಹಿಳೆಯರಿಗೆ ಭರವಸೆ ನೀಡಿದರು. ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಕುರಿತು ಅಧಿಕಾರಿಗಳಿಗೆ ಸೂಚನೆ ಹೋಗಿದೆ. ಈ ಬಗ್ಗೆ ಅತೀ ಶೀಘ್ರವಾಗಿ ಕ್ರಮ ಕೈಗೊಳ್ಳಾಗುತ್ತದೆ ಎಂದು ಭರವಸೆ ನೀಡಿದರು. ಪ್ರತಿಭಟನಾ ನಿರತ ಮಹಿಳೆಯರು ಗ್ರಾಮದಲ್ಲಿ ಇಂದೆಂದೂ ಮದ್ಯದಂಗಡಿ ತೆರೆಯಲು ಅವಕಾಶ ನೀಡದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.












Click it and Unblock the Notifications