ಶಿಗ್ಗಾವಿಯಲ್ಲಿ ಬಿಜೆಪಿ ಭಿನ್ನಮತ : ಎಂಎಲ್‌ಸಿ ಸೋಮಣ್ಣ ರಾಜೀನಾಮೆ!
ಹಾವೇರಿ, ಏಪ್ರಿಲ್ 18 : ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಅಂತಿಮ ಹಂತಕ್ಕೆ ತಲುಪಿದೆ. ಬಿಜೆಪಿ ಟಿಕೆಟ್ ಕೈ ತಪ್ಪಿರುವ ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬುಧವಾರ ಸೋಮಣ್ಣ ಬೇವಿನಮರದ ಅವರು ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರನ್ನು ಭೇಟಿ ಮಾಡಿ, ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಶಿಗ್ಗಾವಿ ಕ್ಷೇತ್ರದಿಂದ ಗುರುವಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಸೋಮಣ್ಣ ಬೇವಿನಮರದ ಅವರು ಶಿಗ್ಗಾವಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಮಾಜಿ ಸಚಿವ ಮತ್ತು ಕ್ಷೇತ್ರದ ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಸೋಮಣ್ಣ ಬೇವಿನಮರದ ಅಸಮಾಧಾನಗೊಂಡಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು 2013ರ ಚುನಾವಣೆಯಲ್ಲಿ 73, 007 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಅವರಿಗೆ ಈ ಬಾರಿಯ ಚುನಾವಣೆಯ ಟಿಕೆಟ್ ನೀಡಬಾರದು ಎಂದು ಸ್ಥಳೀಯ ನಾಯಕರು ಒತ್ತಾಯ ಮಾಡಿದ್ದರು.
ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲು ಸೋಮಣ್ಣ ಅವರು ವಿರೋಧ ವ್ಯಕ್ತಪಡಿಸಿದ್ದರು. '2008ರಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಏಕೈಕ ಕಾರಣಕ್ಕೆ ಬೊಮ್ಮಾಯಿ ಅವರ ಸ್ಪರ್ಧೆಗೆ ನಾವು ಒಪ್ಪಿಗೆ ನೀಡಿದ್ದೆವು' ಎಂದು ಹೇಳಿದ್ದರು.
'2008, 2013ರ ಚುನಾವಣೆ ಬಳಿಕ ಕ್ಷೇತ್ರವನ್ನು ಬಿಟ್ಟುಕೊಡುವ ಭರವಸೆಯನ್ನು ಬಸವರಾಜ ಬೊಮ್ಮಾಯಿ ಅವರು ನೀಡಿದ್ದರು. ಕೊಟ್ಟ ಮಾತು ತಪ್ಪಿರುವ ಅವರಿಗೆ ಟಿಕೆಟ್ ನೀಡಿದರೆ ಬಿಜೆಪಿ ಪರವಾಗಿ ಈ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ' ಎಂದು ಸೋಮಣ್ಣ ಎಚ್ಚರಿಕೆ ನೀಡಿದ್ದರು.












Click it and Unblock the Notifications