ಶಿಗ್ಗಾಂವಿ ಉಪ ಚುನಾವಣೆಗೆ: ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಬೊಮ್ಮಾಯಿ ಪುತ್ರನ ವಿರುದ್ಧ ಸ್ಪರ್ಧೆ: ಲಾಯರ್ ಜಗದೀಶ್
Lawyer Jagadish: ಈಗಾಗಲೇ ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಈ ಪೈಕಿ ಸಂಡೂರು & ಶಿಗ್ಗಾವಿ ಕ್ಷೇತ್ರಗಳಿಗೆ ಬಿಜೆಪಿ ಅಭ್ಯೃರ್ಥಿಗಳನ್ನು ಘೋಷಿಸಿದೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಕನ್ನಡ 11 ಸೀಸನ್‌ನಿಂದ ಹೊರಬಿದ್ದ ಲಾಯರ್ ಕೆ.ಎನ್.ಜಗದೀಶ್ ಅವರು ಕಾಂಗ್ರೆಸ್‌ನಿಂದ ಕಣಕ್ಕಿಳಿಯುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಯಾವ ಕ್ಷೇತ್ರದಿಂದ ಎಂದು ಇಲ್ಲಿ ತಿಳಿಯಿರಿ.
ಉಪಚುನಾವಣೆ ಹಿನ್ನೆಲೆ ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ಶಿಗ್ಗಾವಿಯಿಂದ ಭರತ್ ಬೊಮ್ಮಾಯಿ ಹಾಗೂ ಬಂಗಾರು ಹನುಮಂತುಗೆ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಆದರೆ, ಚನ್ನಪಟ್ಟಣಕ್ಕೆ ಅಭ್ಯರ್ಥಿ ಹೆಸರನ್ನು ಇನ್ನೂ ಘೋಷಣೆ ಆಗಿಲ್ಲ. ಇನ್ನು ರಾಜ್ಯದ ಈ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಉಪ ಚುನಾವಣೆ ನಡೆಯಲಿದೆ. ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ ಚನ್ನಪಟ್ಟಣ ಕ್ಷೇತ್ರಕ್ಕೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ. ಮತ್ತೊಂದೆಡೆ ಕಾಂಗ್ರೆಸ್ ಇನ್ನೂ ಯಾವ ಕ್ಷೇತ್ರಕ್ಲೂ ಟಿಕೆಟ್ ಘೋಷಣೆ ಮಾಡಿಲ್ಲ. ಇದರ ನಡುವೆಯೇ ಹೈ ವೋಲ್ಟೇಜ್ ಕ್ಷೇತ್ರವಾಗಿರುವ ಬಸವರಾಜ ಬೊಮ್ಮಾಯಿ ಮಗ ಭರತ್ ಬೊಮ್ಮಾಯಿ ಮಗ ಸ್ಪರ್ಧಿಸಿರುವ ಶಿಗ್ಗಾಂವ್‌ನಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಲಾಯರ್ ಜಗದೀಶ್ ತುದಿಗಾಲಲ್ಲಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೆ ಬಿಗ್ ಬಾಸ್ ಕನ್ನಡ 11 ಸೀಸನ್‌ನಿಂದ ಹೊರಹಾಕಲ್ಪಟ್ಟ ಲಾಯರ್ ಜಗದೀಶ್ ಅವರಿಗೆ ಕರ್ನಾಟಕದ ಕ್ರಶ್ ಎಂದೇ ಅಭಿಮಾನಿಗಳು ಬಿರುದು ಕೊಟ್ಟಿದ್ದರು. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಮೊದಲನೇ ವಾರದಲ್ಲಿ ಅವಕಾಶ ಸಿಕ್ಕರೆ, ನಾನು ರಾಜ್ಯದ ಸಿಎಂ ಆಗುತ್ತೇನೆ ಎನ್ನುವ ಮಾತನ್ನೂ ಕೂಡ ಹೇಳುವ ಮೂಲಕ ಗಮನ ಸೆಳೆದಿದ್ದರು.
ಅವಾಚ್ಯ ಪದಗಳನ್ನು ಬಳಸಿದ ಹಿನ್ನೆಲೆ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಗಿದೆ. ಇನ್ನು ನಾನು ಕೂಡ ಸಿಎಂ ಆಗುತ್ತೇನೆ ಎಂಬ ಹೇಳಿಕೆ ನೀಡಿದ್ದ ಅವರು ಇದೀಗ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ಟರೆ, ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ಕಾಂಗ್ರೆಸ್ ಹೈಕಮಾಂಡ್ ಯಾರು ಗೊತ್ತಿಲ್ಲ, ಅಕಸ್ಮಾತ್ ಕಾಂಗ್ರೆಸ್ ನನಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಜನರ ಸೇವೆ ಮಾಡುವುದಕ್ಕೆ ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ನನ್ನನ್ನು ಕರೆದು ಟಿಕೆಟ್ ಕೊಟ್ಟರೆ ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆ," ಎಂದು ತಿಳಿಸಿದ್ದಾರೆ. ಆದರೆ ಈಗಾಗಲೇ ಇಂದು ಶಿಗ್ಗಾಂವಿ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications