ಹಾವೇರಿ ಜಿಲ್ಲೆಯಲ್ಲಿ ಸಿನಿಮಾ ಹಾಲ್‍ನಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ
ಹಾವೇರಿ, ಫೆ.06: ಹಾವೇರಿ ಜಿಲ್ಲೆಯಲ್ಲಿ ಚಲನಚಿತ್ರ ಮಂದಿರ, ರಂಗಮಂದಿರ ಹಾಗೂ ಆಡಿಟೋರಿಯಂ, ಜಿಮ್, ಯೋಗಾ ಕೇಂದ್ರ ಹಾಗೂ ಈಜು ಕೊಳಗಳಲ್ಲಿ ಕೋವಿಡ್ ನಿಯಮಾವಳಿ ಪಾಲನೆಮಾಡಿ ಶೇ.100 ರಷ್ಟು ಭರ್ತಿಗೆ ಸರ್ಕಾರದ ಸೂಚನೆಯಂತೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 29 ರಂದು ಹೊರಡಿಸಲಾದ ಆದೇಶವನ್ನು ಮಾರ್ಪಾಡು ಮಾಡಿ ಫೆಬ್ರವರಿ 4ರಂದು ಪರಿಷ್ಕೃತ ಆದೇಶವನ್ನು ಹೊರಡಿಸಲಾಗಿದ್ದು, ಫೆಬ್ರವರಿ 15ರವರೆಗೆ ಆದೇಶ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ಪರಿಷ್ಕೃತ ಕೋವಿಡ್ ಮಾರ್ಗಸೂಚಿಯಂತೆ ಸಿನಿಮಾಹಾಲ್, ರಂಗಮಂದಿರ, ಈಜುಕೋಳ, ಜಿಮ್‍ಗಳಿಗೆ ವಿಧಿಸಿದ್ದ ಶೇ.50ರಷ್ಟು ಆಸನ ಭರ್ತಿ ಆದೇಶವನ್ನು ಸಡಿಸಲಾಗಿದ್ದು, ಕೆಲ ನಿಯಮಗಳ ಪಾಲನೆಯೊಂದಿಗೆ ಶೇ.100 ರಷ್ಟು ಆಸನಗಳ ಭರ್ತಿಗೆ ಅವಕಾಶ ಕಲ್ಪಿಸಲಾಗಿದೆ.
ಸಿನಿಮಾಹಾಲ್, ರಂಗಮಂದಿರ ಹಾಗೂ ಆಡಿಟೋರಿಯಂನಲ್ಲಿ ನಿಗದಿತ ಆಸನ ಸಾಮರ್ಥ್ಯ ಮೀರಬಾರದು. ಪ್ರವೇಶಕ್ಕೆ ಮುನ್ನ ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ಹಾಕಿದ ವ್ಯಕ್ತಿಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಬೇಕು. ಕೋವಿಡ್ ಲಕ್ಷಣ ರಹಿತರಿಸಬೇಕು. ಥರ್ಮಲ್ ಸ್ಕ್ಯಾನರ್ ಬಳಸಿ ಪ್ರವೇಶ ದ್ವಾರದಲ್ಲಿ ಜ್ವರ ತಪಾಸಣೆ ನಡೆಸಬೇಕು. ಹ್ಯಾಂಡ್ ಸ್ಯಾನಿಟೈಸರ್ ಹಚ್ಚಬೇಕು. ಕಡ್ಡಾಯವಾಗಿ ಪ್ರತಿ ಪ್ರೇಕ್ಷಕ ಎನ್-95 ಮುಖಗವಸು ಧರಿಸಬೇಕು.

ಪ್ರತಿ ಪ್ರದರ್ಶನದ ನಂತರ ಸಭಾಂಗಣ ಮತ್ತು ವಿಶ್ರಾಂತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು. ಚಲನಚಿತ್ರ ಮಂದಿರಗಳಲ್ಲಿ ಎಸಿಗಳನ್ನು ಹಾಗೂ ಸಿಪಿಡಬ್ಲ್ಯೂಡಿ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಸಿನಿಮಾ ಮಂದಿರ, ರಂಗಮಂದಿರದೊಳಗೆ ಹಾಗೂ ಆಡಿಟೋರಿಯಂಯೊಳಗೆ ಉಪಹಾರ, ಪಾನೀಯ ಸೇವನೆಯನ್ನು ನಿಷೇಧಿಸಲಾಗಿದೆ. ಈ ಎಲ್ಲ ಷರತ್ತುಗಳನ್ನು ಪ್ರೇಕ್ಷಕರು ಹಾಗೂ ಚಲನಚಿತ್ರ ಮಂದಿರದ ಸಿಬ್ಬಂದಿ ಹಾಗೂ ಮಾಲೀಕರು ಕಡ್ಡಾಯವಾಗಿ ಪಾಲಿಸುವಂತೆ ಷರತ್ತುಗಳನ್ನು ವಿಧಿಸಲಾಗಿದೆ.
ಜಿಮ್ ಮತ್ತು ಯೋಗಾ ಕೇಂದ್ರಕ್ಕೂ ಮಾರ್ಗಸೂಚಿ
ಜಿಮ್ ಮತ್ತು ಯೋಗ ಕೇಂದ್ರಗಳಲ್ಲಿ ವ್ಯಕ್ತಿಗಳು ಕಡ್ಡಾಯವಾಗಿ ಎರಡು ಮೀಟರ್ ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿ ಅಧಿವೇಶನ ಬ್ಯಾಚ್‍ನಂತರ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು. ಸಾಧ್ಯವಾದರೆ ಹೊರಾಂಗಣ ಮತ್ತು ತೆರೆದ ಸ್ಥಳಗಳಲ್ಲಿ ಯೋಗ ಮತ್ತು ಜಿಮ್ ಚಟುವಟಿಕೆಗಳನ್ನು ನಡೆಸುವುದು ಸೂಕ್ತ. ಉಳಿದಂತೆ ಚಲನಚಿತ್ರ ಮಂದಿರ ಪ್ರವೇಶಕ್ಕೆ ವಿಧಿಸಿದಂತೆ ಎರಡು ಡೋಸ್ ವ್ಯಾಕ್ಸಿನ್ ತಪಾಸಣೆ ಸೇರಿದಂತೆ ಎಲ್ಲ ಷರತ್ತುಗಳು ಅನ್ವಯಿಸುತ್ತವೆ. ಈ ನಿಯಮಗಳನ್ನು ಜಿಮ್ ಮತ್ತು ಯೋಗಾ ಕೇಂದ್ರದ ಮಾಲೀಕರು ಪಾಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಈಜು ಕೋಳದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರಿಗೆ ಅವಕಾಶ ಕಲ್ಪಿಸಬಾರದು. ಉಳಿದಂತೆ ಚಲನಚಿತ್ರ ಮಂದಿರ, ಯೋಗ ಹಾಗೂ ಜಿಮ್‍ಗಳಿಗೆ ವಿಧಿಸಿದ ಎಲ್ಲ ಷರತ್ತುಗಳು ಈಜು ಕೋಳದ ಮಾಲೀಕರಿಗೂ ಹಾಗೂ ಗ್ರಾಹಕರಿಗೂ, ಕ್ರೀಡಾಪಟುಗಳಿಗೂ ಅನ್ವಯಿಸುತ್ತವೆ. ಎರಡು ಡೋಸ್ ಲಸಿಕೆ, ಮಾಸ್ಕ್, ಜ್ವರ ತಪಾಸಣೆ ಸೇರಿದಂತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.
ಮಾರ್ಗಸೂಚಿ ತಪ್ಪದೇ ಪಾಲಿಸಿ
ನಿಯಮಗಳ ಪಾಲನೆ ಕುರಿತಂತೆ ಸ್ಥಳೀಯ ಅಧಿಕಾರಿಗಳು ಸದರಿ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘಿಸಿದವರ ಮೇಲೆ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.
ಕೋವಿಡ್-19 ನಿಯಂತ್ರಣದ ದೃಷ್ಟಿಯಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
Recommended Video
ಸಾರ್ವಜನಿಕರಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ಜಾರಿಯಲ್ಲಿರುತ್ತದೆ. ಈ ಕ್ರಮಗಳನ್ನು ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು ಭಾರತ ದಂಡ ಸಂಹಿತೆಯ 188 ನೇ ಪ್ರಕರಣದಡಿ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳಡಿಯಲ್ಲಿನ ಕಾನೂನು ಕ್ರಮದ ಜೊತೆಗೆ ವಿಪತ್ತು ನಿರ್ವಹಣಾ ಅಧಿನಿಯಮ 2005 ರ ಕಲಂ 51 ರಿಂದ 60 ರನ್ವಯ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಉಳಿದಂತೆ ದಿನಾಂಕ 29-01-2022 ರ ಆದೇಶದಲ್ಲಿ ಇತರ ಚಟುವಟಿಕೆ ನೀಡಿದ್ದ ಷರತ್ತುಬದ್ಧ ಆದೇಶ ಮುಂದುವರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications