ಕೊರೊನಾ ವೈರಸ್; ಹಾವೇರಿ ಆಸ್ಪತ್ರೆಯಲ್ಲಿ ವಿಶೇಷ ಘಟಕ ಸ್ಥಾಪನೆ
ಹಾವೇರಿ, ಫೆಬ್ರವರಿ 12 : ಕೊರೊನಾ ವೈರಸ್‍ನಿಂದಾಗಿ ಚೀನಾದ ಜನರು ತತ್ತರಿಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ದೇಶದಲ್ಲೆಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಆದೇಶ ನೀಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿಯೂ ಅಂತಹ ಗುಣಲಕ್ಷಣಗಳು ಕಂಡುಬಂದಂತಹ ರೋಗಿಗಳ ಚಿಕಿತ್ಸೆಗೆ ವಿಶೇಷ ಘಟಕ ಸ್ಥಾಪಿಸಲಾಗಿದೆ.
ಬುಧವಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ್ ವಿಶೇಷ ಘಟಕದ ವೀಕ್ಷಣೆ ಮಾಡಿದರು. ಘಟಕ ನಾಲ್ಕು ಬೆಡ್‍ಗಳನ್ನು ಹೊಂದಿದೆ. ಎರಡು ಕೊಠಡಿಗಳಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಮತ್ತು ಹಗಲು ನಿರಂತರವಾಗಿ ಇಬ್ಬರು ಸ್ಟಾಫ್‌ನರ್ಸ್ ಹಾಗೂ ನುರಿತ ವೈದ್ಯರನ್ನು ನೇಮಕ ಮಾಡಲಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ವೈರಸ್ ಸೋಂಕಿನ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕು ಕಂಡು ಬಂದರೆ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು, ದಾಖಲಾಗಿರುವ ರೋಗಿಗಳು ಮತ್ತು ಸಾರ್ವಜನಿಕರು ಆಸ್ಪತ್ರೆಯ ಕೆಲಸದ ಅವಧಿಯಲ್ಲಿ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ.
ಚೀನಾ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಆತಂಕ ಹುಟ್ಟಿಸಿದೆ. ಜನರು ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಇದುವರೆಗೂ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ.












Click it and Unblock the Notifications