ಕೊರೊನಾ ವೈರಸ್ ಭೀತಿ: ಜುಲೈ 14 ರಿಂದ ರಾಣೇಬೆನ್ನೂರು ಸಂಪೂರ್ಣ ಬಂದ್
ರಾಣೇಬೆನ್ನೂರು, ಜುಲೈ 13: ಕೊರೊನಾ ವೈರಸ್ ಸೋಂಕು ಪ್ರಕರಣಗಳು ರಾಜ್ಯಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದರಿಂದಾಗಿ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರವನ್ನು ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದೆ.
ಇದೇ ರೀತಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದರೆ ನಿಯಂತ್ರಣ ಮಾಡುವುದು ತುಂಬಾ ಕಷ್ಟವಾಗುತ್ತದೆ. ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಲಾಕ್ ಡೌನ್ ಮಾಡಲು ರಾಣೇಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್ ಅವರಲ್ಲಿ ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿರುವ ಶಾಸಕರು, ಸಾರ್ವಜನಿಕ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡುವುದಾಗಿದ್ದು, ಜುಲೈ 14, 2020 ರ ಮಂಗಳವಾರ ರಾತ್ರಿ 8 ರಿಂದ ಜುಲೈ 20, 2020 ರ ಸೋಮವಾರ ಮುಂಜಾನೆ 5 ರ ವರೆಗೆ ಹಾಲು ಮತ್ತು ಔಷಧಿ ಹೊರತುಪಡಿಸಿ ಇತರ ಎಲ್ಲ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ.

ಒಂದು ವಾರಗಳ ಕಾಲ ರಾಣೇಬೆನ್ನೂರು ನಗರ ಸಂಪೂರ್ಣ ಬಂದ್ ಇರುವ ಕಾರಣ ಅಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡಿ ಕೊರೊನಾ ವೈರಸ್ ತಡೆಗಟ್ಟಲು ಸಹಕಾರ ನೀಡಬೇಕೆಂದು ಸ್ಥಳೀಯ ಶಾಸಕ ಅರುಣ್ ಕುಮಾರ್ ಪೂಜಾರ್ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.












Click it and Unblock the Notifications