Prajwal Revanna: ಪ್ರಜ್ವಲ್ ರೇವಣ್ಣ ಜೊತೆಗೆ ಹೊಳೆನರಸೀಪುರ ಮನೆಗೆ ತೆರಳಿ ಪರಿಶೀಲನೆ ನಡೆಸಿದ ಎಸ್‌ಐಟಿ
ಹಾಸನ, ಜೂನ್. 09: ಆಪಾದಿತ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಶನಿವಾರ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಅವರ ಮನೆಗೆ ಸ್ಥಳ ಪರಿಶೀಲನೆಗಾಗಿ ಕರೆದೊಯ್ದಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡ 33 ವರ್ಷದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರದ್ದು ಎಂದು ವೈರಲ್ ಆಗಿರುವ ವಿಡಿಯೋಗಳಲ್ಲಿ ಇರುವ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಂದೆ ಹೊಳೆನರಸೀಪುರ ಶಾಸಕ ಎಚ್ ಡಿ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಜಾಮೀನಿನ ಮೇಲೆ ಹೊರಗಿದ್ದಾರೆ.

ಡಿವೈಎಸ್ಪಿ ಸತ್ಯನಾರಾಯಣ ನೇತೃತ್ವದ ಎಸ್‌ಐಟಿ ತಂಡ ಮಾಜಿ ಸಚಿವ ಪ್ರಜ್ವಲ್ ಅವರ ತಂದೆ ಎಚ್‌ಡಿ ರೇವಣ್ಣ ಅವರ ನಿವಾಸ ಚನ್ನಾಂಬಿಕಾ ನಿಲಯಕ್ಕೆ ಆಗಮಿಸಿದೆ. ಈ ವೇಳೆ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ದ ಅಧಿಕಾರಿಗಳು ಸಹ ಎಸ್‌ಐಟಿ ತಂಡದ ಜೊತೆಗಿದ್ದರು.
ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಹಾಗೂ ಚನ್ನರಾಯಪಟ್ಟಣ ತಾಲೂಕಿನ ಗನ್ನಿಕದ ಕುಟುಂಬಕ್ಕೆ ಸೇರಿದ ತೋಟದ ಮನೆಗಳಿಗೂ ಅಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಪ್ಪು ಟಿ-ಶರ್ಟ್ ಮತ್ತು ಮುಖಕ್ಕೆ ಮಾಸ್ಕ್ ಧರಿಸಿದ್ದ ಸಂಸದರು ಏಪ್ರಿಲ್ 27 ರ ಬಳಿಕ ಮೊದಲ ಬಾರಿಗೆ ತಮ್ಮ ನಿವಾಸಕ್ಕೆ ಬಂದಿದ್ದರು.
ಪ್ರಜ್ವಲ್ ರೇವಣ್ಣ ಬರುವ ಕಾರಣದಿಂದ ಹೊಳೆನರಸೀಪುರದ ಮನೆಯ ಸುತ್ತ ಜಿಲ್ಲಾ ಪೊಲೀಸರು ಭದ್ರತೆ ಹೆಚ್ಚಿಸಿದ್ದರು. 48 ದಿನಗಳ ನಂತರ ಗ್ರಾಮಕ್ಕೆ ಭೇಟಿ ನೀಡುತ್ತಿರುವ ಪ್ರಜ್ವಲ್ ಅವರನ್ನು ನೋಡಲು ಜೆಡಿಎಸ್ ಕಾರ್ಯಕರ್ತರು ಸೇರಿದಂತೆ ಗ್ರಾಮದ ಯಾರೂ ಮನೆಯಲ್ಲಿ ಇರಲಿಲ್ಲ ಎಂಬುದು ಕುತೂಹಲ ಮೂಡಿಸಿದೆ.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಜರ್ಮನಿಗೆ ಪಲಾಯನ ಮಾಡಿದ್ದರು. ಏಪ್ರಿಲ್ 27 ರಂದು ಲೋಕಸಭೆ ಚುನಾವಣೆ ಮುಗಿದ ನಂತರ ಪ್ರಜ್ವಲ್ ಜರ್ಮನಿಗೆ ಹಾರಿದ್ದು, ಒಂದು ತಿಂಗಳಿಗೂ ಹೆಚ್ಚು ಕಾಲ ವಿದೇಶದಲ್ಲಿ ಇದ್ದರು. ಮೇ 31 ರಂದು ಮುಂಜಾನೆ 1.10 ಕ್ಕೆ ಜರ್ಮನಿಯ ಮ್ಯೂನಿಚ್‌ನಿಂದ ಬಂದಿಳಿದ ನಂತರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಎಸ್‌ಐಟಿ ಅವರನ್ನು ಬಂಧಿಸಿದೆ.












Click it and Unblock the Notifications