ಆಸ್ತಿ ವಿವರ ಘೋಷಿಸಿದ ಪ್ರಜ್ವಲ್ ರೇವಣ್ಣ: ದೊಡ್ಡಗೌಡರ ಮೊಮ್ಮಗ ಎಷ್ಟು ಕೋಟಿ ಒಡೆಯ ಗೊತ್ತಾ?
ಹಾಸನ, ಮಾರ್ಚ್ 29: 2024ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳು ಅಂತಿಮವಾಗಿದೆ. ಒಂದೆಡೆ ಚುನಾವಣಾ ಪ್ರಚಾರ ಕೂಡ ಭರದಿಂದ ಸಾಗುತ್ತಿದ್ದು, ಮತ್ತೊಂದೆಡೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭವಾಗಿದೆ.
ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಂಸದ ಪ್ರಜ್ವಲ್ ರೇವಣ್ಣ ನಿನ್ನೆ( ಮಾರ್ಚ್ 28) ಗುರುವಾರ ನಾಮಪತ್ರ ಸಲ್ಲಿದ್ದಾರೆ. ನಾಮಪತ್ರದ ಜೊತೆಗೆ ಪ್ರಜ್ವಲ್ ರೇವಣ್ಣ ತಮ್ಮ ಆಸ್ತಿ ಮೌಲ್ಯಗಳನ್ನು ಘೋಷಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಘೋಷಿಸಿದ ಆಸ್ತಿ ಮೌಲ್ಯಕ್ಕೆ ಹೋಲಿಸಿದೆ. ಈ ಬಾರಿ ನಾಲ್ಕು ಪಟ್ಟು ಹೆಚ್ಚಳವಾಗಿದ್ದು, ತಮ್ಮ ಒಟ್ಟು ಆಸ್ತಿ ಮೌಲ್ಯ 40.94 ಕೋಟಿ ರೂಪಾಯಿ ಎಂದು ಪ್ರಜ್ವಲ್ ರೇವಣ್ಣ ಘೋಷಿಸಿದ್ದಾರೆ.

5.44 ಕೋಟಿ ಚರಾಸ್ತಿ, 35.40 ಕೋಟಿ ಸ್ಥಿರಾಸ್ತಿ ಸೇರಿದಂತೆ ಪ್ರಜ್ವಲ್ ರೇವಣ್ಣ 40.94 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದು, ಸದ್ಯ 9.29 ಲಕ್ಷ ನಗದು ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿ 56 ಲಕ್ಷ ನಗದು ಹೊಂದಿದ್ದಾರೆ. ಕಳೆದ ಐದು ವರ್ಷದಲ್ಲಿ ಕೃಷಿಯಿಂದ 2.75 ಕೋಟಿ ಆದಾಯ ಗಳಿಸಿರುವ ಪ್ರಜ್ವಲ್ ರೇವಣ್ಣ ಕೃಷಿಯೇತರ ಮೂಲದಿಂದ 1.33 ಕೋಟಿ ಆದಾಯ ಗಳಿಕೆ ಮಾಡಿದ್ದಾರೆ.
31 ಹಸು, ನಾಲ್ಕು ಎತ್ತು, ಒಂದು ಟ್ರ್ಯಾಕ್ಟರ್ ಹೊಂದಿರುವ ಪ್ರಜ್ವಲ್ ರೇವಣ್ಣ, ಬೆಂಗಳೂರು ಮೈಸೂರು ಸೇರಿದಂತೆ ವಿವಿಧೆಡೆ ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ. ಹೊಳೆನರಸೀಪುರ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿದ್ದಾರೆ. ಅತ್ತೆ ಅನುಸೂಯರಿಂದ 22 ಲಕ್ಷ, ಅತ್ತೆ ಶೈಲಜಾರಿಂದ 10 ಲಕ್ಷ, ಅಜ್ಜಿ ಚನ್ನಮ್ಮರಿಂದಲೂ 23 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ.

ತಂದೆ ರೇವಣ್ಣರಿಂದ 86 ಲಕ್ಷ, ಸಹೋದರ ಡಾ.ಸೂರಜ್ ರಿಂದ 1ಕೋಟಿ ರೂಪಾಯಿ ಸಾಲ ಪಡೆದಿರುವ ಪ್ರಜ್ವಲ್ ರೇವಣ್ಣ, ಒಟ್ಟು 4.48 ಕೋಟಿ ಸಾಲ ಹೊಂದಿದ್ದಾರೆ. ಹಾಗೂ ಸರ್ಕಾರಕ್ಕೆ 3.04 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದ್ದು, ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವ ಬಗ್ಗೆಯೂ ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು ಪ್ರಜ್ವಲ್ ರೇವಣ್ಣ 67 ಲಕ್ಷ ಮೌಲ್ಯದ 1 ಕೆ.ಜಿ 100 ಗ್ರಾಂ ಚಿನ್ನಾಭರಣ ಹೊಂದಿದ್ದು, 17.48 ಲಕ್ಷ ಮೌಲ್ಯದ 23 ಕೆ.ಜಿ ಬೆಳ್ಳಿ ಹಾಗೂ 1.90 ಲಕ್ಷ ಮೌಲ್ಯದ ವಜ್ರದ ಆಭರಣ ಹೊಂದಿರುವುದಾಗಿ ಪ್ರಜ್ವಲ್ ರೇವಣ್ಣ ನಾಮ ಪತ್ರದ ಜೊತೆಗೆ ಆಸ್ತಿ ಮೌಲ್ಯಗಳನ್ನು ಘೋಷಿಸಿದ್ದಾರೆ.












Click it and Unblock the Notifications