ಬಸ್ ಕಾಯುತ್ತಿದ್ದ ಯುವತಿ ಕಿಡ್ನ್ಯಾಪ್; ಕಾರಿನಲ್ಲೇ ಕಲ್ಯಾಣ!
ಹಾಸನ, ಫೆಬ್ರವರಿ 05 : ಬಸ್ಸಿಗಾಗಿ ಕಾಯುತ್ತಿದ್ದ ಯುವತಿಯನ್ನು ಅಪಹರಿಸಿ ಕಾರಿನಲ್ಲಿಯೇ ವಿವಾಹವಾದ ಘಟನೆ ಹಾಸನದಲ್ಲಿ ನಡೆದಿದೆ. ಕಾರಿನಲ್ಲೇ ನಡೆದ ಕಲ್ಯಾಣದ ವಿವಾದ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮುಂದೇನಾಗಲಿದೆ?.
ಹಾಸನ ತಾಲೂಕಿನ ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಸ್‌ಗಾಗಿ ಕಾಯುತ್ತಿದ್ದ ಯುವತಿಯನ್ನು ಅಪಹರಣ ಮಾಡಿ, ಬಲವಂತವಾಗಿ ವಿವಾಹವಾಗಿರುವುದು ಅತ್ತೆಯ ಮಗ.
ಯುವತಿಯನ್ನು ಆಕೆಯ ಅತ್ತೆಯ ಮಗ ಪ್ರೀತಿಸುತ್ತಿದ್ದ. ಆದರೆ, ಯುವತಿ ಮದುವೆಗೆ ನಿರಾಕರಿಸಿದ್ದಳು. ಆದ್ದರಿಂದ, ಆಕೆ ಬಸ್‌ಗಾಗಿ ಕಾಯುತ್ತಿದ್ದಾಗ ಸ್ನೇಹಿತರ ಜೊತೆ ಸೇರಿ ಅಪಹರಣ ಮಾಡಿದ್ದಾನೆ.

ಬಳಿಕ ಕಾರಿನಲ್ಲಿಯೇ ಆಕೆಗೆ ತಾಳಿ ಕಟ್ಟಿದ್ದು, ಅದನ್ನು ವಿಡಿಯೋ ಮಾಡಿದ್ದಾನೆ. ಯುವತಿಗೆ ತಾಳಿ ಕಟ್ಟುವಾಗ ಆತನ ಸ್ನೇಹಿತರು ಯುವತಿಯನ್ನು ಬಲವಂತವಾಗಿ ಹಿಡಿದುಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಯುವತಿಯ ಪೋಷಕರು ಸಹ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಅತ್ತೆಯ ಮಗ ವಿವಾಹವಾಗಿರುವ ವಿಚಾರ ತಿಳಿಯುತ್ತಿದ್ದಂತೆ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ದುದ್ದ ಪೊಲೀಸರು ಈ ಪ್ರಕರಣದ ವಿಚಾರಣೆಯನ್ನು ನಡೆಸಲಿದ್ದಾರೆ. ಯುವತಿ, ಆಕೆಯ ಪೋಷಕರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಿದ್ದಾರೆ. ಸಿನಿಮಾ ಶೈಲಿಯಲ್ಲಿ ನಡೆದ ಈ ವಿವಾಹ ಮುಂದೇನಾಗಲಿದೆ? ಕಾದು ನೋಡಬೇಕು.












Click it and Unblock the Notifications