ಗದಗದಲ್ಲಿ ದಾರುಣ ಘಟನೆ: ಹೆರಿಗೆ ವೇಳೆ ತಾಯಿ&ಅವಳಿ ಮಕ್ಕಳು ಸಾವು, ತಪ್ಪಾಗಿದ್ದೇನು..?
ಗದಗ, ಫೆಬ್ರವರಿ 05: ಸಿಜೆರಿಯನ್ ಹೆರಿಗೆ ಬಳಿಕ ಅವಳಿ ಮಕ್ಕಳು ಹಾಗೂ ತಾಯಿ ಸಾವನ್ನಪ್ಪಿರುವ ದಾರುಣ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದ್ದು, ಮೂರ್ನಾಲ್ಕು ದಿನದಲ್ಲಿ ಮೂರು ಜೀವಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿ ವಿರುಪಾಪುರ ಗ್ರಾಮದ ನಂದಿನಿ ಹಾಗೂ ಆಕೆಯ ಮಕ್ಕಳು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ನಂದಿನಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು ಹೀಗಾಗಿ ಕುಟುಂಬಸ್ಥರು ಗಜೇಂದ್ರಗಡ ಪಟ್ಟಣದ ಕಾರೊಡಗಿಮಠ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಫೆಬ್ರವರಿ 2ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಎರಡು ಬಾರಿ ಸ್ಕ್ಯಾನ್ ಮಾಡಿದ್ದಾರೆ. ಈ ವೇಳೆ ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಬಳಿಕ ಅವಳಿ ಮಕ್ಕಳಾದ ಕಾರಣ ಸಿಜೆರಿಯನ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದು, ಕುಟುಂಬಸ್ಥರು ಒಪ್ಪಿಗೆ ಕೊಟ್ಟಿದ್ದಾರೆ. ಫೆಬ್ರವರಿ 2ರಂದೇ ಸಿಜೆರಿಯನ್ ಮಾಡಿ ಹೆರಿಗೆ ಮಾಡಲಾಗಿದ್ದು, ಒಂದು ಗಂಡು, ಒಂದು ಹೆಣ್ಣು ಮಗು ಜನಿಸಿದ್ದರು.
ಈ ವಿಷಯ ತಿಳಿದು ಕುಟುಂಬಸ್ಥರು ಖುಷಿ ಪಡುವ ಮುನ್ನವೇ ಆಘಾತ ಕಾದಿತ್ತು. ನಂದಿನಿಗೆ ಜನಿಸಿದ್ದರ ಎರಡು ಮಕ್ಕಳು ಸಾವನ್ನಪ್ಪಿವೆ ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿಯೇ ಬಾಣಂತಿಯಾದರೂ ಆರೋಗ್ಯವಾಗಲಿ ಎಂದು ಆಶಿಸುತ್ತಿದ್ದ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಬಾಣಂತಿ ನಂದಿನಿ ಕೂಡ ತೀವ್ರ ರಕ್ತ ಸ್ರಾವದಿಂದ ಅಸ್ವಸ್ಥಗೊಂಡಿದ್ದರು. ಕೂಡಲೇ ವೈದ್ಯರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ನಂದಿನಿ ಮೃತಪಟ್ಟಿದ್ದಾರೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಮತ್ತು ಮಕ್ಕಳ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗಜೇಂದ್ರಗಡ ಪಟ್ಟಣದ ಖಾಸಗಿ ಆಸ್ಪತ್ರೆ ಎದುರು ಸಂಬಂಧಿಕರು ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಸಿಜೆರಿಯನ್ ವೇಳೆ ರಕ್ತದ ವ್ಯವಸ್ಥೆ ಮಾಡದೇ ಹೆರಿಗೆ ಮಾಡಿದ್ದಾರೆ. ಹೀಗಾಗಿ ರಕ್ತ ಕೊರತೆಯಿಂದಲೇ ಬಾಣಂತಿ ಸಾವನ್ನಪ್ಪಿದ್ದಾಳೆ ಎಂಬ ಆರೋಪಗಳು ಕೇಳಿಬಂದಿದ್ದು, ಕುಟುಂಬಸ್ಥರು ವೈದ್ಯರ ವಿರುದ್ಧ ಕಿಡಿಕಾರಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಗಜೇಂದ್ರಗಢ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರನ್ನು ಸಮಾಧಾನ ಪಡಿಸಿದ್ದಾರೆ. ಬಾಣಂತಿ ಸಾವು ಹಾಗೂ ಅವಳಿ ಮಕ್ಕಳ ಸಾವಿನ ಬಗ್ಗೆ ದೂರು ದಾಖಲಾಗಿದ್ದು, ತನಿಖೆಯಿಂದ ತಪ್ಪೇನು ಎನ್ನುವುದು ಹೊರಬರಬೇಕಿದೆ.












Click it and Unblock the Notifications