ಗದಗದಲ್ಲಿ ‘ಥರ್ಡ್ ಐ’ ಲೋಕಾರ್ಪಣೆ ಮಾಡಿದ ಗೃಹ ಸಚಿವ ಜಿ.ಪರಮೇಶ್ವರ್
ಗದಗ, ಸೆಪ್ಟೆಂಬರ್, 08: ಅಕ್ರಮ, ಅಪರಾಧಗಳ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆಗೆ ಆಧುನಿಕ ಉಪಕರಣಗಳ ಅಗತ್ಯವಿದ್ದು, ಈ ಹಿನ್ನೆಲೆ ಗದಗ ನಗರದ ಸುರಕ್ಷತೆ ದೃಷ್ಟಿಯಿಂದ ಥರ್ಡ್ ಐ ಯೋಜನೆ ಜಾರಿ ಮಾಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಬಲವರ್ಧನೆಗೆ ಸರ್ಕಾರದಿಂದ ಅನುದಾನ ವಿನಿಯೋಗಿಸಲಾಗುತ್ತದೆ ಎಂದರು.

ಡ್ರಗ್ಸ್ ಬಳಕೆ ಹೆಚ್ಚಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಡ್ರಗ್ಸ್ ನಿಯಂತ್ರಣ ಮಾಡಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ. ಇತರೆ ಜಿಲ್ಲೆಗೆ ಹೋಲಿಸಿದರೆ ಗದಗ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಪ್ರಕರಣಗಳು ತೀರಾ ಕಡಿಮೆ ಎಂಬುದು ಸಮಾಧಾನದ ವಿಷಯ. ಡ್ರಗ್ಸ್ ಮುಕ್ತ ಜಿಲ್ಲೆಯಾದರೆ, ಇತರೆ ಜಿಲ್ಲೆಗೂ ಗದಗ ಮಾದರಿಯಾಗುತ್ತದೆ ಎಂದರು.
ಇನ್ನು ಜಿಲ್ಲೆಯಲ್ಲಿ ಹೊಸ ಪೊಲೀಸ್ ಠಾಣೆ, ಸಿಬ್ಬಂದಿ ನೇಮಕ ಕುರಿತು ಪೊಲೀಸ್ ಇಲಾಖೆಯಿಂದ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಬಜೆಟ್ ಮುಗಿದಿರುವ ಕಾರಣ ಬೇಡಿಕೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಪರಮೇಶ್ವರ ಹೇಳಿದರು.
ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಶಿಸ್ತು ಬದ್ಧ ಕಾನೂನು ಜಾರಿಗೆ ಈ ಥರ್ಡ್ ಐ ಯೋಜನೆ ಅಳವಡಿಸಿಕೊಳ್ಳಲಾಗಿದೆ. ನಗರದಾದ್ಯಂತ ಹೈ ಕೆಪಾಸಿಟಿ ಕೆಮೆರಾಗಳ ಕಣ್ಗಾವಲಿನಲ್ಲಿ ಥರ್ಡ್ ಐ ಯೋಜನೆ ಜಾರಿಯಾಗಿದೆ ಎಂದು ಎಚ್.ಕೆ. ಪಾಟೀಲ ತಿಳಿಸಿದರು. ಇನ್ನು 2017-18ರಲ್ಲಿ ಲಕ್ಕುಂಡಿ ಪ್ರಾಧಿಕಾರ ಕುರಿತು ಬಜೆಟ್‌ನಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಕಾನೂನು ರಚನೆ ಆಗಿರಲಿಲ್ಲ. 2020ರಲ್ಲಿ ಕಾನೂನು ರಚನೆ ಆದರೂ ಅನುಷ್ಠಾನ ಆಗಿರಲಿಲ್ಲ. ಈಗ ಸೂಕ್ತ ಕಾಲ ಕೂಡಿ ಬಂದಿದೆ ಎಂದರು.
ಈಗ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯಮಟ್ಟದ ಲಕ್ಕುಂಡಿ ಅಭಿವೃದ್ಧಿ ಸಲಹಾ ಮಂಡಳಿ ರಚನೆ ಆಗಿದ್ದು, ಶಾಸನ ರಚನೆಯಂತೆ ಸಮಿತಿ, ಪ್ರಾಧಿಕಾರ ಕಾರ್ಯ ನಿರ್ವಹಿಸಲಿವೆ. ಹಾಗೆಯೇ ಗೃಹ ಸಚಿವರು ಇಂದು ಪ್ರಾಧಿಕಾರ ಕಚೇರಿ ಉದ್ಘಾಟನೆ ಮಾಡಿದ್ದಾರೆ ಎಂದು ಎಚ್.ಕೆ. ಪಾಟೀಲ ಹೇಳಿದರು.
ಈ ವೇಳೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಎಸ್ಪಿ ಬಿ.ಎಸ್. ನೇಮಗೌಡ, ಜಿ.ಎಸ್. ಪಾಟೀಲ, ಗಡ್ಡದೇವರಮಠ ಸೇರಿದಂಯೆ ಮತ್ತಿತರರು ಇದ್ದರು.












Click it and Unblock the Notifications