ಜನವರಿ 11ರಂದು ದುಬೈನಲ್ಲಿ ರಾಹುಲ್ ಗಾಂಧಿ ಭಾಷಣ
ದುಬೈ, ಜನವರಿ 08 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದುಬೈ ಪ್ರವಾಸಕ್ಕೆ ಸಕಲ ಸಿದ್ಧತೆ ನಡೆದಿದೆ. ಜನವರಿ 11ರಂದು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಜನವರಿ 11 ಮತ್ತು 12ರಂದು ರಾಹುಲ್ ಗಾಂಧಿ ದುಬೈ ಪ್ರವಾಸ ಕೈಗೊಳ್ಳಲಿದ್ದಾರೆ. ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಜನವರಿ 11ರಂದು ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ. ಸುಮಾರು 40 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ರಾಹುಲ್ ಗಾಂಧಿ ಅವರು ಮೊದಲ ದಿನ ಭಾರತೀಯ ಕಾರ್ಮಿಕರ ಜೀವನ ಕ್ರಮವನ್ನು ವೀಕ್ಷಿಸಲಿದ್ದಾರೆ. ಬಳಿಕ ಅವರ ಜೊತೆ ಕಾರ್ಮಿಕರ ಕ್ಯಾಂಪ್‌ನಲ್ಲಿ ಸಂವಾದ ಕಾರ್ಯಕ್ರಮವನ್ನು ನಡೆಸಲಿದ್ದಾರೆ. ಅನಿವಾಸಿ ಭಾರತೀಯ ಉದ್ಯಮಿಗಳ ಜೊತೆಯೂ ಮಾತುಕತೆ ನಡೆಸಲಿದ್ದಾರೆ.

ಜನವರಿ 12ರಂದು ಅಬುಧಾಬಿಯ ಶೇಕ್ ಝಾಹಿದ್ ಮಸೀದಿಗೆ ಭೇಟಿ ನೀಡಲಿದ್ದಾರೆ. ಅಬುಧಾಬಿಯಲ್ಲಿ ಅನಿವಾಸಿ ಭಾರತೀಯ ಉದ್ಯಮಿಗಳ ಜೊತೆ ಚರ್ಚೆ ನಡೆಸಲಿದ್ದಾರೆ.
'ಕಳೆದ ಒಂದು ವರ್ಷದಿಂದ ಅನಿವಾಸಿ ಭಾರತೀಯರು ರಾಹುಲ್ ಗಾಂಧಿ ಅವರ ದುಬೈ ಭೇಟಿಗೆ ಒತ್ತಾಯಿಸುತ್ತಿದ್ದರು. ಆದರೆ, ಬಿಡುವಿಲ್ಲದ ಕಾರ್ಯಕ್ರಮದಿಂದ ಸಾಧ್ಯವಾಗಿರಲಿಲ್ಲ. ಈ ಸಮಯ ಕೂಡಿ ಬಂದಿದೆ' ಎಂದು ಕಾರ್ಯಕ್ರಮದ ಸಂಯೋಜಕಿ ಡಾ.ಆರತಿಕೃಷ್ಣ ಹೇಳಿದ್ದಾರೆ.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ರಾಹುಲ್ ಗಾಂಧಿ ಅವರ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಆನ್‌ಲೈನ್ ಮೂಲಕ ನೋಂದಣಿ ಕಡ್ಡಾಯ ಎಂಬ ನಿಯಮವೂ ಇಲ್ಲ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.












Click it and Unblock the Notifications