ಕುಡಿಯುವ ನೀರಿನ ಪೂರೈಕೆಗೆ ತಿರುವು ಯೋಜನೆ

By: ನವಲಗುಂದ ಶಾಸಕ ಕೋನರಡ್ಡಿ
Subscribe to Oneindia Kannada

ಉತ್ತರ ಕರ್ನಾಟಕದ ಕುಡಿಯುವ ನೀರಿನ ಏಕೈಕ ಆಶಾಕಿರಣವಾದ ಈ ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆಯಿಂದ ಮುಖ್ಯವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಧಾರವಾಡ, ಗದಗ, ಬಾಗಲಕೋಟ, ಬೆಳಗಾವಿ ಜಿಲ್ಲೆಯ 13 ತಾಲೂಕಿನ ಕುಡಿಯುವ ನೀರಿನ ಹಾಗೂ ಮಲಪ್ರಭಾ ನದಿಯಿಂದ ಕುಡಿಯಲು ನೀರೊದಗಿಸಲ್ಪಡುವ ಪಟ್ಟಣಗಳು ಹಾಗೂ ಗ್ರಾಮಗಳು ಕುಡಿಯುವ ನೀರಿನ ತೀವ್ರ ತೊಂದರೆ ಅನುಭವಿಸುತ್ತಿರುವ ಕಾರಣ ಪಶ್ಚಿಮಾಭಿಮುಖವಾಗಿ ಹರಿಯುವ ಮಹಾದಾಯಿ ನದಿಯ ಉಪ ನದಿಗಳಾದ ಕಳಸಾ ಮತ್ತು ಬಂಡೂರಿ ನಾಲೆಗಳಿಂದ ಕ್ರಮವಾಗಿ 3.56 ಟಿ.ಎಂ.ಸಿ. ಮತ್ತು 4.00 ಟಿ.ಎಂ.ಸಿ. ನೀರನ್ನು ಮಲಪ್ರಭಾ ನದಿಗೆ ಒಟ್ಟು 7.56 ಟಿ.ಎಂ.ಸಿ. ನೀರನ್ನು ತಿರುವುಗೊಳಿಸಲು ಕಳಸಾ-ಬಂಡೂರಿ ನಾಲಾ ಯೋಜನೆಗಳನ್ನು ರೂಪಿಸಿ 22-08-2000 ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಮ್. ಕೃಷ್ಣ ಹಾಗೂ ಭಾರೀ ನೀರಾವರಿ ಸಚಿವ ಹೆಚ್.ಕೆ. ಪಾಟೀಲ ಅವರು ಆಡಳಿತಾತ್ಮಕ ಅನುಮೋದನೆ ನೀಡಿ ಒಪ್ಪಿಗೆ ಸೂಚಿಸಿದ್ದರು.

ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ ಈ ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಜಲ ಸಂಪನ್ಮೂಲ ಮಂತ್ರಾಲಯದ 30-04-2002 ರ ಪತ್ರದಲ್ಲಿ ತತ್ವಾಧಾರಿತ ತೀರುವಳಿ ನೀಡಲಾಗಿತ್ತು. ಅಲ್ಲದೆ, ಕೇಂದ್ರ ಅನುಮತಿ ಕೂಡ ನೀಡಿರುತ್ತದೆ.

ಗೋವಾ ಸರಕಾರದ ಅಂದಿನ ಮುಖ್ಯಮಂತ್ರಿ ಹಾಗೂ ಇಂದಿನ ಕೇಂದ್ರ ಸಚಿವ ಮನೋಹರ ಪರಿಕ್ಕರ ಅವರ ಆಕ್ಷೇಪಣೆಯ ಹಿನ್ನೆಲೆಯಲ್ಲಿ, 19-09-2002 ರ ಕೇಂದ್ರ ಜಲ ಸಂಪನ್ಮೂಲ ಮಂತ್ರಾಲಯದ ಪತ್ರದಲ್ಲಿ ತತ್ವಾಧಾರಿತ ತೀರುವಳಿಯ ಅನುಮತಿಯನ್ನು ತಡೆಹಿಡಿಯಲಾಗಿದೆ.

ಕಳಸಾ ನಾಲಾ ಯೋಜನೆಯ ಕೂಡು ಕಾಲುವೆ ಕಾಮಗಾರಿಯನ್ನು ಅಕ್ಟೋಬರ್ 2006 ರಲ್ಲಿ ಅರಣ್ಯೇತರ ಪ್ರದೇಶದಲ್ಲಿ ಕೈಗೊಳ್ಳಲಾಗಿದೆ. 5.15 ಕಿ.ಮೀ. ಉದ್ದದ ಕೂಡು ಕಾಲುವೆಯ ಕಾಮಗಾರಿಯಲ್ಲಿ 5.15 ಕಿ.ಮೀ. ಕಾಮಗಾರಿಯು ಪೂರ್ಣಗೊಂಡಿದೆ. ಕಳಸಾ ನಾಲಾ ಯೋಜನೆಯ ಆಣೆಕಟ್ಟಿನ ಪ್ರದೇಶ ಹಾಗೂ ಬಂಡೂರಿ ಆಣೆಕಟ್ಟೆ ಮತ್ತು ನಾಲಾ ಪ್ರದೇಶಗಳು ಅರಣ್ಯ ಪ್ರದೇಶದಲ್ಲಿ ಬರುವುದರಿಂದ ಕೇಂದ್ರ ಜಲ ಆಯೋಗ ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗಳ ತೀರುವಳಿ ಅಗತ್ಯವಿರುತ್ತದೆ. 2006-07 ರಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಲಸಂಪನ್ಮೂಲ ಸಚಿವ ಕೆ.ಎಸ್. ಈಶ್ವರಪ್ಪನವರು ಅಧಿಕಾರದಲ್ಲಿದ್ದಾಗ ಈ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು.

Navalagunda MLA Konaraddi article about Mahadayi River part3

ಕಳಸಾ-ಬಂಡೂರಿ ಯೋಜನೆಗೆ ಅಗತ್ಯವಿರುವ 7.56 ಟಿ.ಎಂ.ಸಿ. ನೀರಿನ ಪ್ರಮಾಣವು ಸೇರಿದಂತೆ ನೀರಾವರಿ ಕುಡಿಯುವ ನೀರು ಹಾಗೂ ಜಲ ವಿದ್ಯುತ್ ಯೋಜನೆಗಳ ಅಗತ್ಯತೆಗಾಗಿ ಒಟ್ಟು 36.558 ಟಿ.ಎಂ.ಸಿ. ನೀರಿನ ಹಂಚಿಕೆಗಾಗಿ ನ್ಯಾಯಾಧಿಕರಣದಲ್ಲಿ ಈಗಾಗಲೇ ಸ್ಟೇಟ್ಮೆಂಟ್ ಆಫ್ ಕ್ಲೇಮ್ಸ್ಗಳನ್ನು ಮತ್ತು ಅಗತ್ಯ ದಾಖಲಾತಿಗಳನ್ನು/ಯೋಜನಾ ವರದಿಗಳನ್ನು ದಾಖಲಿಸಲಾಗಿದೆ. ಇತರೆ ಕಣಿವೆ ರಾಜ್ಯಗಳು ಸಲ್ಲಿಸಿರುವ ಸ್ಟೇಟ್ಮೆಂಟ್ ಆಫ್ ಕ್ಲೇಮ್ಸ್ಗಳಿಗೆ ಉತ್ತರಗಳನ್ನು/ಪ್ರತ್ಯುತ್ತರಗಳನ್ನು ದಾಖಲಿಸಲಾಗಿದೆ. ರಾಜ್ಯದ ಪರವಾಗಿ ಐವರು ಪರಿಣಿತ ಸಾಕ್ಷಿದಾರರುಗಳ ಪಟ್ಟಿಯನ್ನು ನ್ಯಾಯಾಧಿಕರಣದ ಮುಂದೆ ಈಗಾಗಲೇ ದಾಖಲಿಸಲಾಗಿದೆ. ನ್ಯಾಯಾಧಿಕರಣದ ಕಲಾಪಗಳು ಪ್ರಾರಂಭಗೊಂಡಿದ್ದು, ಕಲಾಪಗಳು ಪ್ರಗತಿಯಲ್ಲಿದೆ. ಮಹದಾಯಿ ಕಣಿವೆಯ ಇಳುವರಿಯ ಕುರಿತು ಕಣಿವೆ ರಾಜ್ಯಗಳು ಪರಿಣಿತ ಸಾಕ್ಷಿದಾರರುಗಳ ಅಫಿಡವಿಟ್ಗಳನ್ನು ದಾಖಲಿಸಲಗಿದ್ದು, ಸದರಿ ಪರಿಣಿತರ ಪಾಟೀ ಸವಾಲು ನಡೆಯಬೇಕಾಗಿದೆ.

ಕರ್ನಾಟಕ ರಾಜ್ಯಕ್ಕೆ ಕಳಸಾ-ಬಂಡೂರಿ ಯೋಜನೆಗಾಗಿ 7.56 ಟಿಎಂಸಿ ನೀರಿನ ಅಗತ್ಯವಿದ್ದು, ಮಹದಾಯಿ ಕಣಿವೆಯೊಳಗಿನ ಪ್ರದೇಶಗಳ ನೀರಾವರಿ, ಕುಡಿಯುವ ನೀರಿನ ಬಳಕೆ ಮತ್ತು ಸೌಲಭ್ಯಗಳಿಗಾಗಿ 1.50 ಟಿಎಂಸಿ, ಮಹದಾಯಿ ಜಲ ವಿದ್ಯುತ್ ಯೋಜನೆಗಾಗಿ 14.971 ಟಿಎಂಸಿ ನೀರಿನ ಅವಶ್ಯಕತೆಯಿದೆ. ಅದೇ ರೀತಿ ಕಾಳಿ ಜಲವಿದ್ಯುತ್ ಯೋಜನೆಯಡಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗಾಗಿ ಮಹದಾಯಿ ನೀರನ್ನು ಕಾಳಿ ನದಿಗೆ ತಿರುವುಗೊಳಿಸಲು 5.527 ಟಿಎಂಸಿ ನೀರು ಬೇಕಾಗುತ್ತದೆ. ಅದೇ ರೀತಿ ಮಹದಾಯಿ ನದಿಯ ನೀರನ್ನು ಮಲಪ್ರಭಾ ನದಿಗೆ ತಿರುವುಗೊಳಿಸಿ ರಾಮದುರ್ಗ, ಬೈಲಹೊಂಗಲ ಮತ್ತು ಸವದತ್ತಿ ತಾಲೂಕುಗಳಲ್ಲಿ ಕುಡಿಯುವ ಹಾಗೂ ನೀರಾವರಿ ಯೋಜನೆಗಳಿಗೆ (ಶೇ. 75ರ ಅವಲಂಬನೆಯ ಮೇಲೆ ಲಭ್ಯವಾಗುವ ಹೆಚ್ಚುವರಿ ನೀರಿನ ಪ್ರಮಾಣದಲ್ಲಿ) 7 ಟಿಎಂಸಿ ನೀರಿನ ಅಗತ್ಯವಿದೆ ಎಂದು ರಾಜ್ಯ ಪ್ರತಿಪಾದಿಸುತ್ತದೆ.

ಆದರೆ ವಾಸ್ತವಿಕತೆ ನಮ್ಮ ರಾಜ್ಯದ ಪಾಲಿನಲ್ಲಿ ಉಳಿದ ಅಂದಾಜು 12 ಟಿಎಂಸಿಗೂ ಅಧಿಕ ನೀರನ್ನು ನೀರಾವರಿಗಾಗಿ ಬಳಸಿಕೊಳ್ಳಲು ಅನುಮತಿ ಕೇಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ರಾಜ್ಯದ ಸಂಸತ್ ಸದಸ್ಯರುಗಳು, ಉಭಯ ಸದನಗಳ ನಾಯಕರುಗಳು, ಶಾಸಕರುಗಳು, ರೈತ ಮುಖಂಡರುಗಳು ಹಾಗೂ ಮಠಾಧೀಶರುಗಳೊಡನೆ ನಡೆದ ಸಭೆಯಲ್ಲಿ ಮಹದಾಯಿ ವಿವಾದದ ಕುರಿತು ಪ್ರಧಾನ ಮಂತ್ರಿಯವರಿಗೆ ಸಲ್ಲಿಸಬಹುದಾದ ಮನವಿ ಪತ್ರ ಕುರಿತು ಸರ್ವ ಪಕ್ಷದ ಸಭೆಯಲ್ಲಿ ಚರ್ಚಿಸಲಾಯಿತು ಹಾಗೂ ನ್ಯಾಯಾಧೀಕರಣವನ್ನು ಹೊರತುಪಡಿಸಿ ವಿವಾದವನ್ನು ಬಗೆಹರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡಲು ನಿರ್ಧರಿಸಲಾಯಿತು.

ಅದರಂತೆ ಸರ್ವಪಕ್ಷಗಳ ಮುಖಂಡರ ನಿಯೋಗವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವನ್ನು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು. ಆದರೆ ಕೇಂದ್ರ ಸರಕಾರದಿಂದ ಅಂದಿನಿಂದ ಇಲ್ಲಿಯವರೆಗೆ ಈ ಯೋಜನೆ ಜಾರಿಗಾಗಿ ಯಾವುದೇ ಸಕಾರಾತ್ಮಕ ಪ್ರಯತ್ನ ನಡೆಸದಿರುವುದು ರೈತ ಹೋರಾಟಗಾರರ ಹಾಗೂ ಉತ್ತರ ಕರ್ನಾಟಕದ ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಈಗಲಾದರೂ ಕೇಂದ್ರ ಗಂಭೀರ ಚಿಂತನೆ ನಡೆಸುವ ಮೂಲಕ ಈ ಭಾಗಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಸರ್ವಪಕ್ಷ ನಿಯೋಗ ಹೋಗಿ ಬಂದ ನಂತರ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ,ರು ನರೇಂದ್ರ ಮೋದಿಯವರಿಗೆ ಭೇಟಿಗೆ ಅವಕಾಶ ತೆಗೆದುಕೊಂಡು ರಾಜ್ಯದಲ್ಲಿ ತೀವ್ರ ಸ್ವರೂಪದಿಂದ ಹೋರಾಟ ಪ್ರಾರಂಭವಾಗಿದ್ದು, ಈ ಮಹಾದಾಯಿ ಯೋಜನೆ ನ್ಯಾಯಾಧಿಕರಣದಲ್ಲಿದ್ದರೂ, ಕೂಡ ಪ್ರಧಾನ ಮಂತ್ರಿಗಳಿಗೆ ಇರುವ ಅಧಿಕಾರವನ್ನು ಉಪಯೋಗಿಸಿ ಕುಡಿಯುವ ನೀರಿನ ಈ ಯೋಜನೆಗೆ ನಾನು ಹಾಗೂ ಹಿಂದಿನ ಪ್ರಧಾನ ಮಂತ್ರಿಗಳು ಕೆಲ ರಾಜ್ಯಗಳಿಗೆ ನಿರ್ಣಯ ತೆಗೆದುಕೊಂಡು ಕುಡಿಯುವ ನೀರನ್ನು ಪೂರೈಸಿದಂತೆ ತಾವು ಕೂಡ ಈ ಯೋಜನೆ ಜಾರಿ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಸಂಪೂರ್ಣ ವಿವರಣೆ ನೀಡಿ ಮನವರಿಕೆ ಮಾಡಿಕೊಟ್ಟು ರಾಜ್ಯದಲ್ಲಿ ಬರಗಾಲದಿಂದ ಸಮಸ್ಯೆ ಉದ್ಭವವಾಗಿದ್ದು ಈ ಕುಡಿಯುವ ನೀರಿನ ಯೋಜನೆ ಸಮಸ್ಯೆ ಬಗೆಹರಿಸಲು ರಾಜ್ಯದ ಪರವಾಗಿ ಪ್ರಧಾನ ಮಂತ್ರಿಗಳಿಗೆ ವಿನಂತಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dharwad district Navalagunda jds MLA Konaraddi article about Mahadayi river dispute. Mahadayi river flows between Karnataka and Goa.
Please Wait while comments are loading...