ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತೆರೆದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಸಂದೇಶ: 473 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಹಾಗೂ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, 45ನೇ ಎಸಿಎಂಎಂ ನ್ಯಾಯಾಲಯಕ್ಕೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 'ವಿಜಯಲಕ್ಷ್ಮಿ ಅವರು ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದರು. ಆ ದೂರು ಆಧರಿಸಿ, ತನಿಖೆ ನಡೆಸಲಾಗಿತ್ತು. ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆರು ಆರೋಪಿಗಳ ವಿರುದ್ಧ 473 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ' ಎಂದು ಮೂಲಗಳು ತಿಳಿಸಿವೆ. ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್‌ವಾರ್‌ಗೆ ನಾಂದಿ ಹಾಡಿದ್ದ ಈ ಪ್ರಕರಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಕಾನೂನು ಹೋರಾಟ ಹೇಗಿತ್ತು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.
'ಬಂಧಿತ ಆರೋಪಿಗಳ ಪೈಕಿ ಕೆಲವರು ಸ್ಯಾಂಡಲ್‌ವುಡ್‌ನ ನಟರೊಬ್ಬರ ಅಭಿಮಾನಿಗಳು ಎಂದು ಹೇಳಿಕೊಂಡು ನಕಲಿ ಖಾತೆ ತೆರೆದಿದ್ದರು. ನಕಲಿ ಖಾತೆಗಳ ಮೂಲಕವೇ ವಿಜಯಲಕ್ಷ್ಮಿ ಅವರಿಗೆ ನಿಂದಿಸಿದ್ದರು. ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದರು' ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.

'ಪೋಸ್ಟ್ ಮಾಡುತ್ತಿರುವುದು ಅಶ್ಲೀಲ ಎಂಬುದು ಗೊತ್ತಿದ್ದೇ ಕಾಮೆಂಟ್ ಮಾಡಿರುವುದಾಗಿ ಆರೋಪಿಗಳು ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳ ಮೊಬೈಲ್ ವಶಪಡಿಸಿಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್ಎಲ್) ರವಾನೆ ಮಾಡಲಾಗಿದೆ. ದತ್ತಾಂಶ ಮರು ಸಂಗ್ರಹದ ವರದಿಯ ನಿರೀಕ್ಷೆಯಲ್ಲಿದ್ದೇವೆ. ಇನ್ನೂ 12 ಐ.ಡಿಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸಂಬಂಧಿಸಿದ ಕಂಪನಿಗೆ ಪತ್ರ ಬರೆಯಲಾಗಿದೆ. ಎರಡೂ ವರದಿಗಳು ಬಂದ ಮೇಲೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು' ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ವಿಜಯಲಕ್ಷ್ಮಿ ದೂರಿನಲ್ಲಿ ಏನಿತ್ತು?
ದಾವಣಗೆರೆಯಲ್ಲಿ ಆಯೋಜಿಸಿದ್ದ 'ಡೆವಿಲ್' ಸಿನಿಮಾದ ಪ್ರಚಾರದಲ್ಲಿ ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದೆ. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದ ಮೂಲಕ ನನ್ನ ಹಾಗೂ ನಮ್ಮ ಕುಟುಂಬದ ಕುರಿತು ಅಶ್ಲೀಲ ಸಂದೇಶಗಳನ್ನು ಹಾಕಿದ್ದರು. ಅದರಿಂದ ತಮ್ಮ ಗೌರವಕ್ಕೆ ಧಕ್ಕೆಯಾಗುತ್ತಿದ್ದು, ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ' ಎಂದು ವಿಜಯಲಕ್ಷ್ಮಿ ಅವರು ಡಿಸೆಂಬರ್ 23ರಂದು ದೂರು ನೀಡಿದ್ದರು.
ದೂರು ನೀಡಿ ಒಂದು ವಾರ ಕಳೆದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಆಗ ವಿಜಯಲಕ್ಷ್ಮಿ ಅವರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿ, ಡಿಸೆಂಬರ್ 31ರಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಅದಾದ ಮೇಲೆ ಚಿಕ್ಕಬಾಣಾವರದ ನಿವಾಸಿ, ಆಟೊ ಚಾಲಕ ಬಿ.ಚಂದ್ರಶೇಖರ್ (45) ಹಾಗೂ ದಾವಣಗೆರೆಯ ನಿವಾಸಿ, ಸಾಫ್ಟ್‌ವೇರ್ ಎಂಜಿನಿಯರ್ ನಿತಿನ್ ಸೇರಿದಂತೆ ಹಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.
ವಿಜಯಲಕ್ಷ್ಮಿ ಮಾತಿನಿಂದ ಕೆರಳಿದ್ದ ಕಿಡಿಗೇಡಿಗಳು
ಸದ್ಯ ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದಾರೆ. ಆದರೆ ಅವರ ನಟನೆಯ ಡೆವಿಲ್ ಸಿನಿಮಾ ಅವರ ಅನುಪಸ್ಥಿತಿಯಲ್ಲಿ ರಿಲೀಸ್ ಆಯಿತು. ಇನ್ನು ಪತಿಯ ಸಿನಿಮಾ ಪ್ರಚಾರದ ಹೊಣೆಯನ್ನು ವಿಜಯಲಕ್ಷ್ಮಿ ಹೊತ್ತಿದ್ದರು. ದಾವಣಗೆರೆಯಲ್ಲಿ ನಡೆದ "ಡೆವಿಲ್" ಸಿನಿಮಾದ ಪ್ರಚಾರ ಕಾರ್ಯಕ್ರಮದ ವೇಳೆ ವಿಜಯಲಕ್ಷ್ಮಿ ಅವರು ಅಭಿಮಾನಿಗಳಿಗೆ "ಯಾರು ಏನೇ ಹೇಳಿದರೂ ತಲೆಕೆಡಿಸಿಕೊಳ್ಳಬೇಡಿ" ಎಂದು ಕಿವಿಮಾತು ಹೇಳಿದ್ದರು. ಅಲ್ಲದೆ ಕೆಲವರು ದರ್ಶನ್ ಜೈಲಲ್ಲಿ ಇದ್ದಾಗ ಏನೇನೋ ಮಾತನಾಡ್ತಾರೆ, ಹೊರಗಡೆ ಇದ್ದಾಗ ಬೆಂಗಳೂರಿನಲ್ಲಿ ಇದ್ದಾರೋ ಇಲ್ವೋ ಅನ್ನೋ ರೀತಿ ಇರ್ತಾರೆ ಎಂದು ಹೇಳಿದ್ದರು.
ಈ ಇಡೀ ಸೈಬರ್ ದಾಳಿ ಪ್ರಕರಣಕ್ಕೆ ಮೂಲ ಕಾರಣವಾಗಿದ್ದು ವಿಜಯಲಕ್ಷ್ಮಿ ಅವರು ಅಭಿಮಾನಿಗಳಿಗೆ ನೀಡಿದ್ದ ಒಂದು ಧೈರ್ಯದ ಮಾತು. ದಾವಣಗೆರೆಯಲ್ಲಿ 'ಡೆವಿಲ್' ಚಿತ್ರದ ಪ್ರಚಾರದ ವೇಳೆ ಅವರು ಮಾತನಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. "ದರ್ಶನ್ ಅಭಿಮಾನಿಗಳಿಗೆ ನನ್ನದೊಂದು ಮಾತು. ಯಾವುದೇ ಕಾರಣಕ್ಕೂ ದರ್ಶನ್ ಅವರನ್ನು ಟೀಕಿಸುವವರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ವಿರೋಧಿಗಳ ಟೀಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಬೇಜಾರು ಕೂಡ ಮಾಡಿಕೊಳ್ಳುವುದಿಲ್ಲ. ದರ್ಶನ್ ಅವರ ಮೇಲೆ ಪ್ರೀತಿ ಇಟ್ಟಿರುವ ನೀವೂ ಸಹ ಅಷ್ಟೇ, ಯಾರೋ ಏನೋ ಅಂದರು ಎಂದು ಕಲೆ ಕೆಡಿಸಿಕೊಳ್ಳದೆ ಆರಾಮಾಗಿ ಇರಿ" ಎಂದಿದ್ದರು.

ಈ ಹೇಳಿಕೆಯನ್ನೇ ನೆಪವಾಗಿಟ್ಟುಕೊಂಡು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ತಿರುಗಿಬಿದ್ದಿದ್ದರು. ಪತಿಯ ವಿರುದ್ಧ ಕೇಳಿಬರುತ್ತಿದ್ದ ಟೀಕೆಗಳಿಂದ ಅಭಿಮಾನಿಗಳು ಕುಗ್ಗಬಾರದು ಎಂಬ ಸದುದ್ದೇಶದಿಂದ ವಿಜಯಲಕ್ಷ್ಮಿ ಈ ಮಾತುಗಳನ್ನು ಹೇಳಿದ್ದರು. ಆದರೆ, ಇದೇ ಮಾತನ್ನು ದ್ವೇಷದ ಅಸ್ತ್ರವನ್ನಾಗಿ ಮಾಡಿಕೊಂಡ ಕೆಲವು ಕಿಡಿಗೇಡಿಗಳು, ವಿಜಯಲಕ್ಷ್ಮಿ ಅವರನ್ನೇ ಗುರಿಯಾಗಿಸಿಕೊಂಡು ಸೈಬರ್ ದಾಳಿ ನಡೆಸಲು ಆರಂಭಿಸಿದ್ದರು. ನಕಲಿ ಖಾತೆಗಳನ್ನು ಸೃಷ್ಟಿಸಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಅಶ್ಲೀಲ ಸಂದೇಶಗಳನ್ನು ಹಂಚಿಕೊಂಡಿದ್ದರು. ಕೊನೆಗೆ ತಾಳ್ಮೆ ಕಳೆದುಕೊಂಡ ವಿಜಯಲಕ್ಷ್ಮಿ ಅವರು ಕಾನೂನು ಹೋರಾಟದ ಹಾದಿ ಹಿಡಿಯಬೇಕಾಯಿತು.
"ನನ್ನ ಹಾಗೂ ನನ್ನ ಕುಟುಂಬದ ಕುರಿತು ಅಶ್ಲೀಲ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ನಮ್ಮ ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ಇದು ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ" ಎಂದು ಉಲ್ಲೇಖಿಸಿ ವಿಜಯಲಕ್ಷ್ಮಿ ಅವರು ಡಿಸೆಂಬರ್ 23ರಂದು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ದೂರು ನೀಡಿ ಒಂದು ವಾರ ಕಳೆದರೂ ಕ್ರಮ ಕೈಗೊಳ್ಳದಿದ್ದಾಗ, ವಿಜಯಲಕ್ಷ್ಮಿ ಅವರು ಡಿಸೆಂಬರ್ 31ರಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರನ್ನು ಖುದ್ದಾಗಿ ಭೇಟಿ ಮಾಡಿ ಚರ್ಚಿಸಿದ್ದರು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬೇಟೆಯಾಡಿದರು. ಇವರಲ್ಲಿ ಚಿಕ್ಕಬಾಣಾವರದ ಆಟೋ ಚಾಲಕ ಬಿ.ಚಂದ್ರಶೇಖರ್ (45) ಮತ್ತು ದಾವಣಗೆರೆಯ ಸಾಫ್ಟ್‌ವೇರ್ ಎಂಜಿನಿಯರ್ ನಿತಿನ್ ಸೇರಿದಂತೆ ಆರು ಮಂದಿಯನ್ನು ಸಿಸಿಬಿ ಬಂಧಿಸಿದೆ. ಬಂಧಿತರಲ್ಲಿ ಕೆಲವರು ಕನ್ನಡದ ಮತ್ತೊಬ್ಬ ಖ್ಯಾತ ನಟನ ಅಭಿಮಾನಿಗಳು ಎಂದು ಹೇಳಿಕೊಂಡು ನಕಲಿ ಖಾತೆಗಳನ್ನು ತೆರೆದು ಈ ಕೃತ್ಯ ಎಸಗುತ್ತಿದ್ದರು ಎಂಬುದು ಬಯಲಾಗಿದೆ.
ಕ್ಲಾಸ್ ಫ್ಯಾನ್ಸ್ ಎಂದೇ ಉಲ್ಲೇಖಿಸಿದ್ದ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ಅವರು ತಮ್ಮ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ ಸೈಬರ್ ದಾಳಿಯ ವಿರುದ್ಧ ರಣಕಹಳೆ ಊದಿದ್ದರು. ಕೇವಲ ದೂರು ನೀಡುವುದಷ್ಟೇ ಅಲ್ಲದೆ, ಅಶ್ಲೀಲವಾಗಿ ನಿಂದಿಸುತ್ತಿದ್ದವರಿಗೆ ಸಾಮಾಜಿಕ ಜಾಲತಾಣದ ಮೂಲಕವೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. 15 ಖಾತೆಗಳು, 150 ಪೋಸ್ಟ್‌ಗಳು ಸೇರಿ ಸಾಕ್ಷ್ಯ ಸಮೇತ ದೂರು ನೀಡಿದ್ದರು. ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತರುತ್ತಿದ್ದ ಕಿಡಿಗೇಡಿಗಳ ವಿರುದ್ಧ ವಿಜಯಲಕ್ಷ್ಮಿ ಅವರು ಕೇವಲ ಆರೋಪ ಮಾಡಿಲ್ಲ, ಬದಲಾಗಿ ಬಲವಾದ ಸಾಕ್ಷ್ಯಗಳನ್ನು ಪೊಲೀಸರಿಗೆ ಒಪ್ಪಿಸಿದ್ದರು. ತಮ್ಮ ಕುರಿತು ಹರಿದಾಡಿದ್ದ ಅಶ್ಲೀಲ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳು ಹಾಗೂ ಆ ಖಾತೆಗಳ ಸಂಪೂರ್ಣ ಮಾಹಿತಿಯನ್ನು ಅವರು ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ್ದರು. ಖುದ್ದಾಗಿ ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ ಅವರು, ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.

ದೂರು ನೀಡಿದ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಕಿಡಿಗೇಡಿಗಳ ಮುಖವಾಡ ಕಳಚಿದ್ದರು. "ಇಲ್ಲಿರುವ ಎಲ್ಲ 'ಕ್ಲಾಸ್ ಫ್ಯಾನ್ಸ್'ಗಳಿಗೆ ನಿಮ್ಮ ಮಟ್ಟವನ್ನು ಸಾರ್ವಜನಿಕವಾಗಿ ತೋರಿಸಿದ್ದಕ್ಕೆ ಧನ್ಯವಾದಗಳು. ಈ ಖಾತೆಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ಈ ರೀತಿ ಕಿರುಕುಳ ನೀಡುವುದನ್ನು ಇನ್ನು ಮುಂದೆ 'ಫ್ಯಾನ್ಡಮ್' ಎಂದು ಕರೆಯಲು ಸಾಧ್ಯವಿಲ್ಲ," ಎಂದು ಅವರು ನೇರವಾಗಿ ಎಚ್ಚರಿಕೆ ನೀಡಿದ್ದರು. ಕಿರುಕುಳ ನೀಡುವವರ ಸಂಸ್ಕಾರದ ಬಗ್ಗೆ ಪ್ರಶ್ನಿಸಿದ್ದ ಅವರು, "ಕೀಳು ಭಾಷೆ ಬಳಸುವ "ಕ್ಲಾಸಿ" ಹುಡುಗಿಯರಿಗೆ ವಿಶೇಷ ಚಪ್ಪಾಳೆ. ಹಾಗೆಯೇ ತಾಯಂದಿರನ್ನೂ, ಸಂಸ್ಕಾರವನ್ನೂ ಮರೆತು ಆಕಾಶದಿಂದ ಇಳಿದು ಬಂದವರಂತೆ ವರ್ತಿಸುವ "ಕ್ಲಾಸಿ" ಹುಡುಗರಿಗೆ ಇನ್ನು ಹೆಚ್ಚಿನ ವಿವರಣೆ ಬೇಕಿಲ್ಲ. ಇದನ್ನೆಲ್ಲ ಸಾಮಾನ್ಯವೆಂದು ಮೌನವಾಗಿ ಒಪ್ಪಿಕೊಳ್ಳುವವಳು ನಾನಲ್ಲ" ಎಂದು ಗುಡುಗಿದ್ದರು. ಇದು ನನ್ನ ಬಗ್ಗೆ ಮಾತ್ರವಲ್ಲ, ಪ್ರತಿ ಮಹಿಳೆಯೂ ಗೌರವಕ್ಕೆ ಅರ್ಹಳು ಎಂಬುದನ್ನು ನೆನಪಿಸುವ ಸಂದೇಶ ಇದು" ಎಂದು ಬರೆಯುವ ಮೂಲಕ ತಮ್ಮ ಹೋರಾಟ ಕೇವಲ ವೈಯಕ್ತಿಕವಲ್ಲ, ಅದು ಮಹಿಳೆಯರ ಪರವಾಗಿ ಎಂಬ ಬಲವಾದ ಸಂದೇಶ ರವಾನಿಸಿದ್ದರು ವಿಜಯಲಕ್ಷ್ಮಿ.
ಸ್ಟಾರ್ ವಾರ್‌ಗೆ ಕಾರಣವಾಗಿದ್ದ ಪ್ರಕರಣ
ಸ್ಯಾಂಡಲ್‌ವುಡ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ನಡುವೆ ನಡೆದಿದ್ದ ಸ್ಟಾರ್‌ವಾರ್‌ಗೆ ಕಾನೂನಿನ ಬಿಸಿ ಮುಟ್ಟಿದೆ. ವಿಜಯಲಕ್ಷ್ಮಿ ದರ್ಶನ್ ಅವರು ನೀಡಿದ್ದ ದೂರಿನ ಬೆನ್ನಲ್ಲೇ ಸಿಸಿಬಿ ಪೊಲೀಸರು ಆರು ಮಂದಿ ವಿರುದ್ಧ 473 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದೇ ಪ್ರಕರಣ ಸ್ಟಾರ್‌ವಾರ್‌ಗೆ ಕಾರಣ ಕೂಡ ಆಗಿತ್ತು.
ಈ ಇಡೀ ಪ್ರಕರಣದ ಹಿನ್ನೆಲೆ ನೋಡುವುದಾದರೆ, ನಟ ಸುದೀಪ್ ಅವರ ಭಾಷಣದ ನಡುವೆಯೇ ವಿಜಯಲಕ್ಷ್ಮಿ ಅವರು ಆಡಿದ್ದ ಕೆಲವು ಮಾತುಗಳು ಕಿಡಿ ಹಚ್ಚಿದ್ದವು. ದಾವಣಗೆರೆಯಲ್ಲಿ ನಡೆದ 'ಡೆವಿಲ್' ಚಿತ್ರದ ಪ್ರಚಾರದ ವೇಳೆ ವಿಜಯಲಕ್ಷ್ಮಿ ನೀಡಿದ್ದ ಹೇಳಿಕೆಗಳನು ಸುದೀಪ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ನೀಡಿದ ಪರೋಕ್ಷ ಟಾಂಗ್ ಎಂದು ಭಾವಿಸಿದರು. ಈ ಒಂದು ಸಣ್ಣ ಹೇಳಿಕೆಯ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಯುದ್ಧವೇ ಶುರುವಾಯಿತು. ಬಳಿಕ ಅಭಿಮಾನಿಗಳು ಪರಸ್ಪರ ನಿಂದಿಸಿಕೊಳ್ಳಲು ಆರಂಭಿಸಿದರು. ಈ ವೇಳೆ ಕಿಡಿಗೇಡಿಗಳು ನೇರವಾಗಿ ವಿಜಯಲಕ್ಷ್ಮಿ ದರ್ಶನ್ ಅವರನ್ನೇ ಗುರಿಯಾಗಿಸಿಕೊಂಡು ಅತ್ಯಂತ ಕೀಳು ಮಟ್ಟದ ಕಾಮೆಂಟ್‌ಗಳನ್ನು ಮಾಡಿದರು. ಕೆಲವರು ಮತ್ತೊಬ್ಬ ನಟನ ಅಭಿಮಾನಿಗಳ ಸೋಗಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, ಅಶ್ಲೀಲ ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ವೈಯಕ್ತಿಕ ಘನತೆಗೆ ಧಕ್ಕೆ ತಂದಿದ್ದರು.
ಈ ನಿಂದನೆಗಳು ಮಿತಿಮೀರಿದಾಗ ವಿಜಯಲಕ್ಷ್ಮಿ ಅವರು ಮೌನ ಮುರಿದು ಕಾನೂನು ಹೋರಾಟಕ್ಕೆ ಇಳಿದರು. ದೂರು ದಾಖಲಾದ ಬೆನ್ನಲ್ಲೇ ಸಿಸಿಬಿ ಪೊಲೀಸರು ಆಟೋ ಚಾಲಕ ಚಂದ್ರಶೇಖರ್ ಹಾಗೂ ಸಾಫ್ಟ್‌ವೇರ್ ಎಂಜಿನಿಯರ್ ನಿತಿನ್ ಸೇರಿದಂತೆ ಹಲವರನ್ನು ಬಂಧಿಸಿದರು. ಈ ಸರಣಿ ಬಂಧನಗಳಾದ ಬಳಿಕವಷ್ಟೇ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದ್ದ "ಸ್ಟಾರ್ ವಾರ್" ಕೊಂಚ ತಣ್ಣಗಾಯಿತು.
ಪ್ರಸ್ತುತ ಸಿಸಿಬಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳು ತಾವು ಅಶ್ಲೀಲ ಕಾಮೆಂಟ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಇನ್ನು 12 ಐಡಿಗಳ ಬಗ್ಗೆ ತನಿಖೆ ಮುಂದುವರಿದಿದ್ದು, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಕಂಪನಿಗಳಿಂದ ವರದಿ ಬಂದ ನಂತರ ಮತ್ತೊಂದು ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗುವ ಸಾಧ್ಯತೆಯಿದೆ. ವಿಜಯಲಕ್ಷ್ಮಿ ದರ್ಶನ್ ಅವರ ಕಾನೂನು ಹೋರಾಟವು ಸ್ಯಾಂಡಲ್‌ವುಡ್‌ನ ಅಭಿಮಾನಿ ಬಳಗಗಳಿಗೆ ನಿಜಕ್ಕೂ ಒಂದು ಎಚ್ಚರಿಕೆಯ ಗಂಟೆಯಾಗಿದೆ.
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ -
Vijay Sethupathi: ರಿಷಬ್ ಶೆಟ್ಟಿ ಜೊತೆ ನಟಿಸುವ ದೊಡ್ಡ ಆಸೆ ನನಗಿದೆ: ಆಸೆ ಬಿಚ್ಚಿಟ್ಟ ನಟ ವಿಜಯ್ ಸೇತುಪತಿ -
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
ದುಬೈಗೂ ಮೊದಲೇ ನಟಿ ರನ್ಯಾ ರಾವ್ಗೆ ಉಗಾಂಡಾ ಏಜೆಂಟ್ ಕೋಟ್ಯಂತರ ರೂಪಾಯಿ ವಂಚನೆ: ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು














Click it and Unblock the Notifications