Karnataka Budget 2023: ಹುಬ್ಬಳ್ಳಿ- ಧಾರವಾಡಕ್ಕೆ ಸಿಕ್ಕಿದೇನು? ಸಂಪೂರ್ಣ ವಿವರ ಇಲ್ಲಿದೆ
ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಹುಬ್ಬಳ್ಳಿ- ಧಾರವಾಡಕ್ಕೆ ಏನೆಲ್ಲ ಘೋಷಣೆ ಮಾಡಿದ್ದಾರೆ ಅನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಧಾರವಾಡ, ಫೆಬ್ರವರಿ, 17: ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡಿಸಿದ್ದಾರೆ. ಒಟ್ಟು ಬಜೆಟ್‌ನ ₹3,09,182 ಕೋಟಿ ರೂಪಾಯಿ ಆಗಿದ್ದು, ಧಾರವಾಡ-ಹುಬ್ಬಳ್ಳಿಗೆ ಏನೆಲ್ಲ ಕೊಡುಗೆ ನೀಡಿದ್ದಾರೆ ಅನ್ನುವ ವಿವರವನ್ನು ನೀಡಲಾಗಿದೆ.
ಹುಬ್ಬಳ್ಳಿ- ಧಾರವಾಡಕ್ಕೆ ಕೊಡುಗೆ ಏನು?
ಹುಬ್ಬಳ್ಳಿಯಲ್ಲಿನ ಜಯದೇವ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯನ್ನು 350 ರಿಂದ 430ಕ್ಕೆ ಹೆಚ್ಚಿಸಲಾಗಿದೆ. ₹250 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ₹6 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ, ಮೈಸೂರು, ಕಲಬುರಗಿಯಲ್ಲಿ ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಕ್ಲಿನಿಕ್ ಮತ್ತು ಬೆಂಗಳೂರಿನಲ್ಲಿ 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು.
ಕಾರ್ಮಿಕರಿಗೆ ಕೈಗೆಟಕುವ ಬೆಲೆಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಹುಬ್ಬಳ್ಳಿ ಮತ್ತು ದಾವಣಗೆರೆಯ ಇಎಸ್‌ಐ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು 50 ರಿಂದ 100ಕ್ಕೆ ಹೆಚ್ಚಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.

ಪ್ರಮುಖ ಯೋಜನೆಗಳ ವಿವರ ಇಲ್ಲಿದೆ
ಬಹುನಿರೀಕ್ಷಿತ ಧಾರವಾಡ -ಬೆಳಗಾವಿ ನೇರ ರೈಲು ಮಾರ್ಗ ಯೋಜನೆಗೆ ಕರ್ನಾಟಕ ಸರ್ಕಾರ ₹150 ಕೋಟಿ ರೂ. ನೀಡಲಿದೆ. ಈ ಹಣವನ್ನು ಭೂ ಸ್ವಾಧೀನಕ್ಕೆ ಬಳಸಲಾಗುವುದು. ಕರ್ನಾಟಕ ಏಕೀಕರಣ ಮತ್ತು ಕನ್ನಡ ಭಾಷೆಗೆ ನೀಡಿದ ಕೊಡುಗೆಯಲ್ಲಿ ಪ್ರಮುಖ ಪಾತ್ರವಹಿಸಿದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನೆರವು ನೀಡಲಾಗುವುದು.
1. ಸರ್ಕಾರದಿಂದ ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನೆರವು ನೀಡಲಾಗುತ್ತದೆ.
2. ₹1,200 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ- ಧಾರವಾಡ ಬೈಪಾಸ್‌ನ 6 ಲೇನಿಂಗ್‌ಗೆ ಚಾಲನೆ ನೀಡಲಾಗಿದೆ.
3. ಹುಬ್ಬಳ್ಳಿ-ಹೊಸಪೇಟೆ-ಬಳ್ಳಾರಿ ಮತ್ತು ಆಂಧ್ರ ಗಡಿ ಹೆದ್ದಾರಿಯನ್ನು ₹2,200 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ.

4. ಹುಬ್ಬಳ್ಳಿ-ಚಿಕ್ಕಜಾಜೂರು ಡಬ್ಲಿಂಗ್ ಯೋಜನೆಗೆ ರಾಜ್ಯ ಸರ್ಕಾರ ₹150 ಕೋಟಿ, ಹೊಸಪೇಟೆ ಹುಬ್ಬಳ್ಳಿ ಲೋಂಡಾದಿಂದ ವಾಸ್ಕೋಡಗಾಮಾ ಡಬ್ಲಿಂಗ್ ಯೋಜನೆಗೆ ₹400 ಕೋಟಿ ನೀಡಿದೆ.
5. ಧಾರವಾಡ, ಶಿವಮೊಗ್ಗ, ಹಾಸನ, ಮಂಗಳೂರು, ರಾಯಚೂರು ಮತ್ತು ಬೆಳಗಾವಿಯಲ್ಲಿ ₹38 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಟೆಸ್ಟಿಂಗ್ ಟ್ರ್ಯಾಕ್‌ಗಳನ್ನು ನಿರ್ಮಿಸಲಾಗಿದೆ.
6. ಧಾರವಾಡ ಮತ್ತು ಮೈಸೂರಿನಲ್ಲಿ ₹31 ರೂ. ಕೋಟಿ ವೆಚ್ಚದಲ್ಲಿ ವಾಹನ ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications