ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ಬೆಳೆದ ಧಾರವಾಡದ ರೈತ!
ಧಾರವಾಡ: ಧಾರವಾಡದಲ್ಲಿ ಇದೀಗ ಬಿಸಿಲ ಝಳ ಜೋರಾಗಿದೆ. ಈ ಸಮಯದಲ್ಲಿ ಜನ ಹಣ್ಣುಗಳು ತಿನ್ನುವುದು ಹಾಗೂ ಮಡಿಕೆಯಿಂದ ಮಾಡಿರುವ ವಸ್ತುಗಳನ್ನು ಬಳಸುವುದು ಹೆಚ್ಚು. ಅಲ್ಲದೆ ಈ ಸಮಯದಲ್ಲಿ ಜನ ಹೆಚ್ಚಾಗಿ ಕಲ್ಲಂಗಡಿ ಹಣ್ಣನ್ನು ಸೇವಿಸುತ್ತಾರೆ. ಕೆಲವೊಂದು ಸಣ್ಣಪುಟ್ಟ ಗೊಂದಲಗಳ ಹೊರತಾಗಿಯೂ ಕಲ್ಲಂಗಡಿ ಹಣ್ಣಿಗೆ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಕಲ್ಲಂಗಡಿ ಹಣ್ಣು ಎಂದರೆ ನಾವು ಸಾಮಾನ್ಯವಾಗಿ ಕೆಂಪು ಕಲ್ಲಂಗಡಿ ಹಣ್ಣು ಎಂದೇ ಅಂದುಕೊಳ್ಳುತ್ತೇವೆ. ಆದರೆ, ಇಲ್ಲೊಬ್ಬರು ರೈತರು ಹಳದಿ ಬಣ್ಣದ ಕಲ್ಲಂಗಡಿ ಹಣ್ಣನ್ನು ಬೆಳೆದು ಗಮನಸೆಳೆದಿದ್ದಾರೆ.
ಹೌದು! ಹೀಗೆ ನಾಲ್ಕರಿಂದ ಐದು ಕೆಜಿ ತೂಕದ ಕಲ್ಲಂಗಡಿ ಹಣ್ಣನ್ನು ಬೆಳೆದಿರುವ ಯುವ ರೈತನ ಹೆಸರು ಮೈಲಾರಪ್ಪ ಗುಡ್ಡಪ್ಪನವರ. ಧಾರವಾಡ ತಾಲ್ಲೂಕಿನ ಕುರುಬಗಟ್ಟಿ ಗ್ರಾಮದ ರೈತ. ತೋಟಗಾರಿಕಾ ಬೆಳೆ ಬೆಳೆಯುವುದರಲ್ಲಿ ಖುಷಿ ಕಂಡಿರುವ ಇವರು ಇದೀಗ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಸಹಜವಾಗಿಯೇ ಕಲ್ಲಂಗಡಿ ಹಣ್ಣು ಕಟ್ ಮಾಡಿದಾಗ ಕೆಂಪು ಬಣ್ಣವಿರುತ್ತದೆ. ಆದರೆ ಮೈಲಾರಪ್ಪ ಅವರು ಬೆಳೆದ ಕಲ್ಲಂಗಡಿ ಹಣ್ಣನ್ನು ಕಟ್ ಮಾಡಿದರೆ ಅದು ಎಲ್ಲರೂ ಅಚ್ಚರಿಗೆ ಒಳಗಾಗುವಂತೆ ಮಾಡುತ್ತದೆ. ಏಕೆಂದರೆ ಇದು ಹಳ್ಳದಿ ಬಣ್ಣದ ಕಲ್ಲಂಗಡಿ. ಆವಿಷ್ಕರಿಸಿದ ತಳಿಯ ಕಲ್ಲಂಗಡಿ ಬೀಜಗಳನ್ನು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ಪಡೆದು ತಮ್ಮ ಹೊಲದಲ್ಲಿ ಬೆಳೆದ ಮೈಲಾರಪ್ಪ ಇದೀಗ ಹಳದಿ ಬಣ್ಣದ ಕಲ್ಲಂಗಡಿಯ ಉತ್ತಮ ಫಸಲು ಪಡೆದಿದ್ದಾರೆ. ಇದರ ಜೊತೆಗೆ ಕೆಂಪು ಕಲ್ಲಂಗಡಿಯನ್ನೂ ಮೈಲಾರಪ್ಪ ಬೆಳೆದಿದ್ದಾರೆ. ಒಂದು ಎಕರೆಗೆ ಅಂದಾಜು ಒಂದು ಲಕ್ಷದಷ್ಟು ಖರ್ಚು ಮಾಡಿದರೆ ಈ ಹಣ್ಣಿನಿಂದ ಸುಮಾರು ಮೂರೂವರೆ ಲಕ್ಷ ಆದಾಯ ಗಳಿಸಬಹುದು ಎನ್ನುತ್ತಾರೆ ಮೈಲಾರಪ್ಪ.
ಒಂದು ಎಕರೆ ಕೃಷಿ ಜಮೀನಿನಲ್ಲಿ ಈ ಹಳದಿ ಬಣ್ಣದ ಕಲ್ಲಂಗಡಿಯನ್ನು ಈ ರೈತ ಬೆಳೆದಿದ್ದಾರೆ. ಕುರುಬಗಟ್ಟಿ ಹೊರತುಪಡಿಸಿದರೆ ಧಾರವಾಡ ತಾಲ್ಲೂಕಿನ ಬಾಡ ಗ್ರಾಮದಲ್ಲೂ ರೈತ ಈ ಹಳದಿ ಬಣ್ಣದ ಕಲ್ಲಂಗಡಿ ಬೆಳೆದಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಇಬ್ಬರು ರೈತರು ಈ ವಿನೂತನ ಕಲ್ಲಂಗಡಿ ಹಣ್ಣನ್ನು ಬೆಳೆದಿದ್ದಾರೆ. ರೈತರ ಈ ವಿಶೇಷ ಪ್ರಯತ್ನಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಧಾರವಾಡದ ಕುರುಬಗಟ್ಟಿ ಗ್ರಾಮದ ಮೈಲಾರಪ್ಪ ಅವರ ಜಮೀನಿಗೆ ಭೇಟಿ ನೀಡಿದ ಅವರು ಹಳದಿ ಬಣ್ಣದ ಕಲ್ಲಂಗಡಿ ನೋಡಿ ಖುಷಿಗೊಂಡಿದ್ದಾರೆ. ಅಲ್ಲದೇ ಆ ಹಣ್ಣಿನ ರುಚಿ ಕೂಡ ಸವಿದು ಫಿದಾ ಆಗಿದ್ದಾರೆ. ಕಡಿಮೆ ಖರ್ಚಿನ ಮೂಲಕ ಒಂದು ಎಕರೆಯಲ್ಲಿ ಈ ಕಲ್ಲಂಗಡಿ ಬೆಳೆದಿರುವ ಈ ರೈತ ಸುಮಾರು 10ರಿಂದ 15 ಟನ್ ಕಲ್ಲಂಗಡಿ ಫಸಲು ಪಡೆದಿದ್ದಾರೆ. ಸದ್ಯಕ್ಕಂತೂ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು, ಇದರಿಂದ ಲಕ್ಷ ಲಕ್ಷ ಆದಾಯದ ನೀರಿಕ್ಷೆಯಲ್ಲಿದ್ದಾರೆ ರೈತ ಮೈಲಾರಪ್ಪ. ಬೇರೆ ಬೇರೆ ದೇಶದ ರೈತರು ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದನ್ನು ನಾವು ನೋಡಿದ್ದೇವೆ. ಆದರೆ, ಇದೀಗ ಧಾರವಾಡದ ರೈತರೇ ಈ ರೀತಿ ಪ್ರಯತ್ನ ಮಾಡಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.












Click it and Unblock the Notifications