Breaking: ಎದೆನೋವಿನಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಮುರುಘಾ ಶರಣರು ಶಿಫ್ಟ್
ಚಿತ್ರದುರ್ಗ, ಸೆಪ್ಟೆಂಬರ್ 2: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾಸ್ಪತ್ರೆಗೆ ಅವರನ್ನು ಸ್ಥಳಾಂತರ ಮಾಡಲಾಗಿದೆ.
ಪೋಕ್ಸೋ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಮುರುಘಾ ಮಠದ ಶಿವಮೂರ್ತಿ ಶ್ರೀಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಶುಕ್ರವಾರ ಮುಂಜಾನೆ 3 ಗಂಟೆ ಸುಮಾರಿಗೆ ಜೈಲು ಸೇರಿದ ಶ್ರೀಗಳಿಗೆ ಕೈದಿ ಸಂಖ್ಯೆ 2261 ಅನ್ನು ನೀಡಲಾಗಿತ್ತು. ಶುಕ್ರವಾರ ಬೆಳಗ್ಗೆ ಜೈಲಿನ ಸಿಬ್ಬಂದಿಗಳ ಬಳಿ ಶ್ರೀಗಳು ಎದೆನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದರು.

ಮುರುಘಾ ಶರಣರ ಆರೋಗ್ಯದಲ್ಲಿ ಏರುಪೇರು ಆದ ಹಿನ್ನೆಲೆ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಬೆಳಗ್ಗೆ 9.10 ಗಂಟೆಗೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.
ಮುರುಘಾ ಶರಣರಿಗೆ 14 ದಿನ ನ್ಯಾಯಾಂಗ ಬಂಧನ: ಗುರುವಾರ ರಾತ್ರಿ ಬಂಧಿಸಲ್ಪಟ್ಟ ಮುರುಘಾ ಶರಣರನ್ನು ಮಧ್ಯರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಧೀಶರಾದ ಕೋಮಲಾ ಶ್ರೀಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು. ತದನಂತರ ಮುರುಘಾ ಶರಣರನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಯಿತು.
ಚಿತ್ರದುರ್ಗದಲ್ಲಿ ರಾತ್ರೋರಾತ್ರಿ ನಡೆದ ಬೆಳವಣಿಗೆಳು ಹಲವು ಕೌತಕಗಳಿಗೆ ಕಾರಣವಾಗಿತ್ತು. ರಾತ್ರಿ 10.22ಕ್ಕೆ ದಿಢೀರ್ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಪೊಲೀಸರು ಬಂಧಿಸಿದ್ದರು.
ಮುರುಘಾ ಶರಣರ ವಿರುದ್ಧ ಏನಿದು ಪೋಕ್ಸೋ ಕೇಸ್: ಅಕ್ಕಮಹಾದೇವಿ ವಸತಿ ನಿಲಯದ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಮುರುಘಾ ಮಠದ ಶರಣರ ವಿರುದ್ಧ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶ್ರೀಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ಶುಕ್ರವಾರದಂದು ನಡೆಯಲಿದೆ. ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲಾಗಿದೆ.
ಇದಲ್ಲದೇ ಸುಮೋಟೋ ಕೇಸ್ ದಾಖಲಿಸಿರುವ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ)ಗೆ ನೋಟಿಸ್ ನೀಡಿದೆ. ಪ್ರಕರಣದ ಬಗ್ಗೆ ಏಳು ದಿನಗಳಲ್ಲಿ ವರದಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅದಲ್ಲದೇ ಪ್ರಕರಣ ಸಂಬಂಧ ಪೋಲೀಸರು ಕೈಗೊಂಡ ಕ್ರಮದ ಬಗ್ಗೆ ಮಕ್ಕಳ ಹಕ್ಕು ರಕ್ಷಣಾ ಆಯೋಗ ಮಾಹಿತಿ ಕೇಳಿದೆ.












Click it and Unblock the Notifications