ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪಗೆ ಗೌರವ ಡಾಕ್ಟರೇಟ್
ಚಿತ್ರದುರ್ಗ, ಜುಲೈ 21: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಏಕೈಕ ಬಿಜೆಪಿ ಶಾಸಕರಾಗಿ ಎಂ. ಚಂದ್ರಪ್ಪ ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ. ಶಾಸಕರ ಗ್ರಾಮೀಣಾಭಿವೃದ್ಧಿ ಕ್ಷೇತ್ರವನ್ನು ಪರಿಗಣಿಸಿ
ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ.

ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದವರಾದ ಇವರು ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪಕರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ದೇವರಾಜ್ ಅರಸ್ ಶಿಕ್ಷಣ ಸಮೂಹದ ಸ್ಥಾಪಕರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶಾಸಕಾಂಗ ಸಮಿತಿ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಶಾಸಕರಾಗಿ ಹೊಳಲ್ಕೆರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿಶೇಷವಾಗಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಶಾಸಕರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ
ಶಾಸಕ ಎಂ ಚಂದ್ರಪ್ಪ ಅವರ ರಾಜಕೀಯ ಹಿನ್ನೆಲೆ ಏನು?
ಜನತಾ ದಳದಿಂದ ರಾಜಕೀಯಕ್ಕೆ ಪ್ರವೇಶ ಕೊಟ್ಟ ಶಾಸಕ ಎಂ ಚಂದ್ರಪ್ಪ ಅವರು, ಕಾಂಗ್ರೆಸ್, ಕೆಜೆಪಿ ಸೇರಿ ಅಂತಿಮವಾಗಿ ಬಿಜೆಪಿಯಲ್ಲಿ ಭದ್ರ ನೆಲೆ ಕಂಡುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಭರಮ ಸಾಗರ ಕ್ಷೇತ್ರದಿಂದ ರಾಜಕೀಯ ಜೀವನ ಆರಂಭಿಸಿರುವ ಶಾಸಕ ಎಂ. ಚಂದ್ರಪ್ಪ ಅವರು ಒಟ್ಟು 7 ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದರಲ್ಲಿ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಭರಮ ಸಾಗರ ಕ್ಷೇತ್ರದಲ್ಲಿ ಮೂರು ಬಾರಿ ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ಅದರಲ್ಲೂ ಹೊಳಲ್ಕೆರೆ ಕ್ಷೇತ್ರದಿಂದ 2018 ಮತ್ತು 2023ರಲ್ಲಿ ಸತತವಾಗಿ ಶಾಸಕರಾಗಿದ್ದಾರೆ.
ಇನ್ನು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಸಮಾರಂಭವು ವಿಶ್ವವಿದ್ಯಾಲಯದ ಆವರಣದಲ್ಲಿರುವ ಬಸವ ಸಭಾ ಭವನದಲ್ಲಿ ಜು 22ರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಈ ಬಾರಿಯ ಘಟಿಕೋತ್ಸವದಲ್ಲಿ 14,750 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ವಿವಿಧ ಕ್ಷೇತ್ರಗಳ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.












Click it and Unblock the Notifications