ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಮಾರ್ಗಕ್ಕೆ ಮೀಸಲಿಟ್ಟ ಅನುದಾನ ಎಷ್ಟು.? ಅಶ್ವಿನಿ ವೈಷ್ಣವ್ ಹೇಳಿದ್ದೇನು?
ಚಿತ್ರದುರ್ಗ, ಆಗಸ್ಟ್, 07: ರಾಜ್ಯದಲ್ಲಿ ರೈಲ್ವೆ ಸಂಬಂಧಿಸಿದಂತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ. ಹಾಗೆಯೇ ಇದೀಗ ರಾಜ್ಯದಲ್ಲಿ ಪ್ರಗತಿಯಲ್ಲಿರುವ ರೈಲ್ವೆ ಯೋಜನೆಗಳ ವಿವರ ಹಾಗೂ ದಾವಣಗೆರೆ-ತುಮಕೂರು-ಚಿತ್ರದುರ್ಗ ನೇರ ರೈಲುಮಾರ್ಗದ ಯೋಜನೆಯ ಪ್ರಗತಿ ವಿವರ ಕುರಿತು ಸಂಸದ ಗೋವಿಂದ ಕಾರಜೋಳ ಸಂಸತ್ತಿನಲ್ಲಿ ಮಾಹಿತಿ ಕೇಳಿದರು. ಹಾಗಾದರೆ ಇದಕ್ಕೆ ಏನೆಲ್ಲ ಉತ್ತರ ಸಿಕ್ಕಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸಂಸದರ ಪ್ರಶ್ನೆಗೆ ಉತ್ತರ ನೀಡಿರುವ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ರೈಲ್ವೆ ಯೋಜನೆಗಳನ್ನು ವಲಯವಾರು ಮಂಜೂರು ಮಾಡಲಾಗುತ್ತದೆ. 01.04.2024ರ ಮಾಹಿತಿಯಂತೆ ಕರ್ನಾಟಕ ರಾಜ್ಯದಲ್ಲಿ ಅಂದಾಜು 47,016 ಕೋಟಿ ರೂಪಾಯಿ ವೆಚ್ಚದ 21 ಹೊಸ ಮಾರ್ಗಗಳು ಹಾಗೂ 10 ಡಬ್ಲಿಂಗ್ ಕಾಮಗಾರಿಗಳು ಸೇರಿ ಒಟ್ಟು 3,840 ಕಿಲೋ ಮೀಟರ್ ಉದ್ದದ 31 ಮೂಲಸೌಲಭ್ಯ ಯೋಜನೆಗಳು ವಿವಿಧ ಹಂತದ ಪ್ರಗತಿ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.

ಇನ್ನು ಇದರಲ್ಲಿ 1,302 ಕಿಲೋ ಮೀಟರ್ ಉದ್ದದ ಮಾರ್ಗದ ಕೆಲಸ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಲಾಗಿದೆ ಮತ್ತು ಮಾರ್ಚ್ 2024ರ ವರೆಗೆ 17,382 ಕೋಟಿ ರೂಪಾಯಿ ಅನುದಾನವನ್ನು ವೆಚ್ಚ ಮಾಡಲಾಗಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ನಡುವೆ 191 ಕಿಲೋ ಮೀಟರ್ ಉದ್ದದ ನೇರ ರೈಲು ಮಾರ್ಗವನ್ನು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ವೆಚ್ಚ ಹಂಚಿಕೆ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗಿದೆ.
ಇದರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಉಚಿತವಾಗಿ ಅವಶ್ಯವಾಗಿರುವ ಭೂಮಿ ಹಾಗೂ ಶೇಕಡ 50ರಷ್ಟು ನಿರ್ಮಾಣ ವೆಚ್ಚವನ್ನು ಹಂಚಿಕೊಳ್ಳುತ್ತಿದೆ. ಒಟ್ಟಾರೆ ಯೋಜನೆಯ ವೆಚ್ಚ 2,142.35 ಕೋಟಿ ರೂಪಾಯಿ ಆಗಲಿದ್ದು, ಮಾರ್ಚ್ 2024ರ ವರೆಗೆ 359.32 ಕೋಟಿ ರೂಪಾಯಿಯಷ್ಟು ವೆಚ್ಚವನ್ನು ಈ ಯೋಜನೆಗಾಗಿ ಮಾಡಲಾಗಿದೆ. 2024-25 ರ ರೈಲ್ವೆ ಬಜೆಟ್‍ನಲ್ಲಿ 150 ಕೋಟಿ ರೂಪಾಯಿ ಅನುದಾನವನ್ನು ಈ ಯೋಜನೆಗಾಗಿ ಒದಗಿಸಲಾಗಿದೆ ಎಂದಿದ್ದಾರೆ.
21 ಹೊಸ ಮಾರ್ಗಗಳ ಪೈಕಿ 33,125 ಕೋಟಿ ರೂಪಾಯಿ ವೆಚ್ಚದ 2,556 ಕಿ.ಮೀ. ಉದ್ದದ ಮಾರ್ಗಗಳಲ್ಲಿ, ಈಗಾಗಲೇ ಮಾರ್ಚ್ 2024ರ ಅಂತ್ಯದ ವೇಳೆಗೆ 7,592 ಕೋಟಿ ರೂಪಾಯಿ ವೆಚ್ಚ ಮಾಡಿ 395 ಕಿ.ಮೀ. ಉದ್ದದ ಮಾರ್ಗವನ್ನು ಪೂರ್ಣಗೊಳಿಸಲಾಗಿದೆ. 13,891 ಕೋಟಿ ರೂಪಾಯಿ ವೆಚ್ಚದ 1,284 ಕಿಲೋ ಮೀಟರ್ ಉದ್ದದ 10 ಡಬ್ಲಿಂಗ್ ಯೋಜನೆಗಳ ಪೈಕಿ ಈಗಾಗಲೇ 9,791 ಕೋಟಿ ವೆಚ್ಚ ಮಾಡಿ 907 ಕಿಲೋ ಮೀಟರ್ ಡಬ್ಲಿಂಗ್ ಕಾಮಗಾರಿ ಮುಗಿಸಲಾಗಿದೆ.
2014ರಿಂದ ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ ಮತ್ತು ಯೋಜನೆಗಳ ಪೂರ್ಣಗೊಳಿಸುವಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2009-2014ರ ವರೆಗೆ ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗೆ 7,835 ರೂಪಾಯಿ ದೊರಕಿದ್ದರೆ, ಅದೇ ಮೋದಿಜಿ ಆಡಳಿತಾವಧಿಯಲ್ಲಿ 2024-25ನೇ ಸಾಲಿನ ಒಂದೇ ವರ್ಷದಲ್ಲಿ 7,559 ಕೋಟಿ ರೂಪಾಯಿ ಅನುದಾನವನ್ನು ರಾಜ್ಯಕ್ಕೆ ನೀಡಲಾಗಿದೆ.
ಇದು ಯುಪಿಎ ಆಡಳಿತಾವಧಿಯಲ್ಲಿ ನೀಡಿದ ಅನುದಾನಕ್ಕೆ ಹೋಲಿಕೆ ಮಾಡಿದರೆ, ಒಂದೇ ವರ್ಷದಲ್ಲಿ ಬರೋಬ್ಬರಿ 9 ಪಟ್ಟು ಹೆಚ್ಚಿನ ಅನುದಾನವನ್ನು ಮೋದಿಜಿ ಸರ್ಕಾರ ನೀಡಿದೆ ಎಂದಿದ್ದಾರೆ. ಯುಪಿಎ ಆಡಳಿತಾವಧಿಯಲ್ಲಿ 2009ರಿಂದ 2014ರ ವರೆಗೆ ಪ್ರತಿ ವರ್ಷ 113 ಕಿಲೋ ಮೀಟರ್ ಸರಾಸರಿಯಂತೆ 565 ಕಿಲೋ ಮೀಟರ್ ರೈಲ್ವೆ ಹಳಿ ನಿರ್ಮಾಣ ಮಾಡಿದರೆ, ಅದೇ ಮೋದಿಜಿ ಆಡಳಿತಾವಧಿಯಲ್ಲಿ 2014-2024ರ ವರೆಗೆ ವರ್ಷಕ್ಕೆ ಸರಾಸರಿ 163 ಕಿಲೋ ಮೀಟರ್‌ನಂತೆ ಒಟ್ಟು 1,633 ಕಿ.ಮೀ. ರೈಲ್ವೆ ಹಳಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications