ಚಿತ್ರದುರ್ಗ: ಕಲುಷಿತ ನೀರು ಸೇವನೆ ಪ್ರಕರಣ: ತನಿಖೆಗೆ ಆದೇಶಿಸಿದ ಸರ್ಕಾರ
ಚಿತ್ರದುರ್ಗ, ಆಗಸ್ಟ್, 02: ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಕುರಿತಂತೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಘಟನೆ ಕುರಿತಂತೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ, ತನಿಖೆಗೆ ಆದೇಶಿಸಿದ್ದು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಈ ತಂಡ ಸ್ಥಳ ಪರಿಶೀಲನೆ ಮಾಡಿ ಮೂರು ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಸೇರಿ ಅನೇಕರು ತನಿಖಾ ತಂಡದಲ್ಲಿದ್ದಾರೆ. ಘಟನೆಯ ಕುರಿತು ವಿಶ್ಲೇಷಣೆ ಮಾಡಿ ತುರ್ತು ತನಿಖಾ ವರದಿಯನ್ನು ನೀಡಲಿದ್ದಾರೆ. ಇದರ ಆಧಾರದ ಮೇರೆಗೆ ತಪ್ಪಿತಸ್ಥರನ್ನು ಪತ್ತೆ ಮಾಡಿ ಕ್ರಮಕೈಗೊಳ್ಳಲು ಆದೇಶಿಸಲಾಗಿದೆ.
ಅಸ್ವಸ್ಥರ ಆರೋಗ್ಯ ವಿಚಾರಿಸಿದ ಸಚಿವ ಡಿ.ಸುಧಾಕರ್
ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತರಾದವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಹೇಳಿದರು.
ಮಂಗಳವಾರ ರಾತ್ರಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಧ್ಯರಾತ್ರಿಯಿಂದಲೇ ಕವಾಡಿಗರಹಟ್ಟಿಯಲ್ಲಿ ಕೆಲವು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಮುಂಜಾನೆಯಿಂದ ಗ್ರಾಮದ ಬಹು ಜನರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದೆ ಎಂದರು.
ಅಲ್ಲದೆ 22 ವರ್ಷದ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಘಟನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಸಂಪೂರ್ಣ ಮಾಹಿತಿ ಪಡೆದು, ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಶೀಘ್ರವಾಗಿ ಪರಿಹಾರವನ್ನು ಮೃತರ ಕುಟುಂಬದವರಿಗೆ ನೀಡಲಾಗುವುದು. ಹಾಗೂ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರ ಘಟನೆ ಕಾರಣ ಹಾಗೂ ಸತ್ಯಾಸತ್ಯೆ ತಿಳಿಯಲಿದೆ ಎಂದರು.
ಇದಕ್ಕೂ ಮುನ್ನ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗ, ಯುರಾಲಜಿ, ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆಯತ್ತಿರುವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ವೈದ್ಯರಿಗೆ ಅಸ್ವಸ್ಥರ ಆರೋಗ್ಯ ಸುಧಾರಿಸುವವರೆಗೂ ಚಿಕಿತ್ಸೆ ಮುಂದುವರೆಸುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications