ಕರ್ತವ್ಯದ ವೇಳೆ ಮದ್ಯ ಸೇವನೆ; ಗೌಡಗೆರೆ ಗ್ರಾಮ ಪಂಚಾಯಿತಿ ಪಿಡಿಓ ಅಮಾನತು
ಚಿತ್ರದುರ್ಗ, ನವೆಂಬರ್, 29: ಅನಧಿಕೃತ ಗೈರು ಹಾಜರಿ ಹಾಗೂ ಕರ್ತವ್ಯದ ವೇಳೆ ಮದ್ಯಪಾನ ಸೇವಿಸಿದ ಹಿನ್ನೆಲೆ ಚಳ್ಳಕೆರೆ ತಾಲ್ಲೂಕು ಗೌಡಗೆರೆ ಗ್ರಾಮ ಪಂಚಾಯಿತಿ ಪಿಡಿಓ ಅವರನ್ನು ಅಮಾನತು ಮಾಡಲಾಗಿದೆ. ಪಿಡಿಓ ವೆಂಕಟೇಶ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತಿ ಸಿಇಓ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕು ಗೌಡಗೆರೆ ಗ್ರಾಮ ಪಂಚಾಯತಿ ಪಿಡಿಓ ವೆಂಕಟೇಶ್ ಅವರ ಮೇಲೆ ಕೇಳಿ ಬಂದ ದೂರುಗಳನ್ನು ಪರಿಶೀಲಿಸಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಅವರಿಗೆ ವರದಿ ನೀಡಿದ್ದರು. ಈ ಹಿನ್ನೆಲೆ ಕೆ.ಸಿ.ಎಸ್(ಸಿ.ಸಿ.ಎ) ನಿಯಾಮಾವಳಿ-1957ರ ನಿಯಮ 10(1)ರ ಅನ್ವಯ ಜಿಲ್ಲಾ ಪಂಚಾಯತಿ ಸಿಇಓ ಎಸ್.ಜೆ.ಸೋಮಶೇಖರ್, ಪಿಡಿಓ ವೆಂಕಟೇಶ ಅವರನ್ನು ಅಮಾನುತು ಮಾಡಿದ್ದಾರೆ.

ಗೌಡಗೆರೆ ಗ್ರಾಮ ಪಂಚಾಯತ್‌ಗೆ ನನ್ನಿವಾಳ ಗ್ರಾಮ ಪಂಚಾಯತ್ ಕಾರ್ಯದರ್ಶಿ ಆರ್.ಪಿ.ವೇದಮೂರ್ತಿ ಅವರನ್ನು ಹೆಚ್ಚುವರಿ ಪಿಡಿಓ ಆಗಿ ನೇಮಕ ಮಾಡಲಾಗಿದೆ.
4,00,000 ರೂಪಾಯಿ ಲಂಚ ಸ್ವೀಕಾರ: ಚಿತ್ರದುರ್ಗ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ 4,00,000 ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಗುತ್ತಿಗೆದಾರನ ಕಾಮಗಾರಿಗೆ ಬಿಲ್ ಪಾವತಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಗುತ್ತಿಗೆದಾರ ಸಿದ್ದನಗೌಡನಿಂದ 4 ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿಯನ್ನು ಬಲೆಗೆ ಕೆಡವಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ದಾಳಿಯನ್ನು ಲೋಕಾಯುಕ್ತ ಡಿವೈಎಸ್ಪಿ ಬಸವರಾಜ್ ನೇತೃತ್ವದಲ್ಲಿ ನಡೆಸಲಾಗಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಎಡಿಎಲ್‌ಆರ್ ಲೋಕಾಯುಕ್ತ ಬಲೆಗೆ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಛೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಲಂಚ ಪಡೆಯುತ್ತಿದ್ದಾಗ ಎಡಿಎಲ್‌ಆರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಘಟನೆ ನಡೆದಿತ್ತು.
ರೈತನ ಜಮೀನಿಗೆ ಸಂಬಂಧಿಸಿದಂತೆ ದಾಖಲೆ ಹಾಗೂ ಪಹಣಿ ನೀಡಲು 15ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, 10 ಸಾವಿರ ಲಂಚ ಪಡೆಯುತ್ತಿದ್ದಾಗ ಎಡಿಎಲ್ ಆರ್.ಗಂಗಣ್ಣ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.
ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಮದ ರೈತ ಕೆ.ಜಿ.ಜಯ್ಯಣ್ಣ ತಮ್ಮ ಜಮೀನಿಗೆ ಸಂಭಂದಿಸಿದಂತೆ ದಾಖಲೆಗಳನ್ನು ಪ್ರತ್ಯೇಕವಾಗಿ ಮಾಡಿಕೊಡಲು ಗಂಗಣ್ಣ 15,000 ರೂಪಾಯಿ ಹಣ ಕೇಳಿದ್ದರು. ಲಂಚ ಕೇಳಿರುವ ಬಗ್ಗೆ ರೈತ ಜಯಣ್ಣ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಲಂಚ ಕೇಳಿದ ಅಧಿಕಾರಿ ಅಮಾನತು: ಈ ದೂರಿನನ್ವಯ ಲೋಕಾಯುಕ್ತ ಪೊಲೀಸರು ಇಂದು ಕಾರಿನ ಚಾಲಕ ಕಿರಣ್ ಎಂಬುವವರು ಜಯಣ್ಣನಿಂದ 10 ಸಾವಿರ ರೂಪಾಯಿ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.












Click it and Unblock the Notifications