ವೀರಗಾಸೆಗೆ ಅಪಮಾನ: ಹೆಡ್‌ಬುಷ್ ಚಿತ್ರದ ವಿರುದ್ಧ ದೂರು
ಚಿತ್ರದುರ್ಗ, ಅಕ್ಟೋಬರ್ 26: ಡಾಲಿ ಧನಂಜಯ್ ಅಭಿನಯದ ಹೆಡ್‌ಬುಷ್ ಚಿತ್ರದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಹಿರಿಯೂರು ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಹೆಡ್‌ಬುಷ್ ಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು ಚಿತ್ರದ ಒಂದು ದೃಶ್ಯದಲ್ಲಿ ಡಾನ್ ಜಯರಾಜ್ ವೀರಗಾಸೆ ಹಾಕಿಕೊಂಡವರ ಮೇಲೆ ಹಲ್ಲೆ ಮಾಡಿದಂತೆ ತೋರಿಸಲಾಗಿದೆ ಇದರಿಂದ ವೀರಗಾಸೆಗೆ ಅವಮಾನ ಆಗಿದೆ ಈ ದೃಶ್ಯವನ್ನು ತೆಗೆಸಬೇಕು ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿರುದ್ಧ ಎಫ್ಐಆರ್ ಪ್ರಕರಣ ದಾಖಲಿಸಿಕೊಳ್ಳುವಂತೆ ಹಿರಿಯೂರು ನಗರ ಸಿಪಿಐ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಬಂಧ ದೂರು ನೀಡಿ ಮಾತಾಡಿರುವ ಹಿಂದೂ ಕಾರ್ಯಕರ್ತರು "ಹೆಡ್ ಬುಷ್ ಚಲನಚಿತ್ರದಲ್ಲಿ ವೀರಭದ್ರನ ಅವತಾರವಾಗಿರುವ ವೀರಗಾಸೆ ವೇಷಧಾರಿಗಳನ್ನು ನಟ ಡಾಲಿ ಧನಂಜಯ ಮನಬಂದಂತೆ ಕಾಲಿನಲ್ಲಿ ಒದೆಯುವ ದೃಶ್ಯ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದಿದೆ'' ಎಂದು ಆರೋಪಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀನಿವಾಸ್ ಮಸ್ಕಲ್, ವೆಂಕಟೇಶ್ ವಿ, ಚೇತನ್ ತಾ ಸಂಯೋಜಕ ಬಜರಂಗದಳ, ಗೋವರ್ಧನ್, ಧನುಷ್, ಹರೀಶ್, ಗೋವಿಂದಾಚಾರ್, ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೆಡ್‌ಬುಷ್ ಸಿನಿಮಾ ಅಕ್ಟೋಬರ್ 21ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಗ್ನಿಶ್ರೀಧರ್ ಬರೆದಿರುವ 'ದಾದಾಗಿರಿಯ ದಿನಗಳು' ಪುಸ್ತಕ ಆಧಾರಿತ ಸಿನಿಮಾ ಇದಾಗಿದ್ದು ಶೂನ್ಯ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಸಿನಿ ರಸಿಕರ ಗಮನ ಸೆಳೆದಿದೆ. ಉತ್ತಮ ಪ್ರದರ್ಶನ ಕಾಣುತ್ತಿರುವ ಹೆಡ್ ಬುಷ್ ಚಿತ್ರತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ.
ಹೆಡ್‌ಬುಷ್ ಸಿನಿಮಾದಲ್ಲಿ ನಮ್ಮ ದೈವಿಕ ಕಲೆ ಆದಂಥ ಸಾವಿರಾರು ವರ್ಷ ಇತಿಹಾಸ ಉಳ್ಳಂತಹ ವೀರಗಾಸೆ ಕಲೆಗೆ ಅವಮಾನ ಮಾಡಿದ್ದಾರೆ. ವೀರಗಾಸೆ ವೇಷ ಭೂಷಣ ಧರಿಸಿ ಅವರಿಗೆ ಮನಬಂದಂತೆ ತಳಿಸುವ ಕೆಲಸ ಮಾಡಲಾಗಿದೆ. ಶೂ ಧರಿಸಿ ಒದೆಯುವುದು ಮನಬಂದಂತೆ ಎಸೆಯೋದು ರೀತಿಯ ದೃಶ್ಯಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದರಿಂದ ವೀರಭದ್ರೇಶ್ವರನಿಗೆ ಅವಮಾನ ಮಾಡಿದ್ದಾರೆ. ವೀರಭದ್ರ ಸ್ವಾಮಿಗೆ ಸಾವಿರಾರೂ ವರ್ಷಗಳ ಹಿನ್ನಲೆ ಇದೆ. ಹೆಡ್‌ಬುಷ್ ಚಿತ್ರದಲ್ಲಿ ವೀರಗಾಸೆ ಕಲೆಗೆ ಮತ್ತು ವೀರಭದ್ರ ಸ್ವಾಮಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.












Click it and Unblock the Notifications