Breaking: ಚಳ್ಳಕೆರೆಯಲ್ಲಿ ಭಾರತ್ ಜೋಡೊ ಯಾತ್ರೆ ಆರಂಭ
ಚಿತ್ರದುರ್ಗ, ಅಕ್ಟೋಬರ್ 12: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ 13ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಬೆಳಗ್ಗೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಆರಂಭವಾಗಿದೆ.
ಮಂಗಳವಾರ ಚಳ್ಳಕೆರೆ ರಸ್ತೆಯ ಸಾಣಿಕೆರೆ ಬಳಿ ಇರುವ ಚೇತನ್ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದಿದ್ದ ರಾಹುಲ್ ಗಾಂಧಿ ಬುಧವಾರ ಪಾದಯಾತ್ರೆ ಮುಂದುವರಿಸಿದ್ದಾರೆ. ಸೋಮವಾರ ಹಿರಿಯೂರು ತಲುಪಿದ್ದ ಪಾದಯಾತ್ರೆ ಮಂಗಳವಾರ ಬೆಳಗ್ಗೆ ಹರ್ತಿಕೋಟೆಯಿಂದ ಸಾಣಿಕೆರೆಯಲ್ಲಿ ವಿಶ್ರಾಂತಿ ಪಡೆದ ಬಳಿಕ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗೇಟ್ ಬಳಿ ವಾಸ್ತವ್ಯ ಹೂಡಿತ್ತು.
ಬುಧವಾರ ಬೆಳಿಗ್ಗೆ 6:30ಕ್ಕೆ ಪಾದಯಾತ್ರೆ ಪುನಾರಂಭಗೊಂಡಿತು. ರಾಹುಲ್ ಗಾಂಧಿ ಸಿದ್ಧರಾಗಿ ಆಗಮಿಸುತ್ತಿದ್ದಂತೆ ಪಾದಯಾತ್ರೆ ಹೊರಟಿತು. ರಾಹುಲ್‌ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆಯಾದರು. ಸಾವಿರಾರು ಜನರ ಸಮ್ಮುಖದಲ್ಲಿ ಪಾದಯಾತ್ರೆ ಮುಂದುವರಿದಿದೆ.

ಪಾದಯಾತ್ರೆಯಲ್ಲಿ ತಮಟೆ, ಗಾರುಡಿ ಗೊಂಬೆ, ಖಾಸಬೇಡರ ಪಡೆ ಸೇರಿ ಹಲವು ಕಲಾತಂಡಗಳು ಪಾದಯಾತ್ರೆಯಲ್ಲಿ ಗಮನ ಸೆಳೆದವು. ಮಾರ್ಗದ ಎರಡೂ ಸಹಸ್ರಾರು ಮಂದಿ ರಾಹುಲ್ ಗಾಂಧಿ ನೋಡುವುದಕ್ಕೆ ನಿಂತಿದ್ದರು. ಕಾಂಗ್ರೆಸ್ ನಾಯಕರು ಜನರತ್ತ ಕೈಬೀಸುತ್ತಾ ಸಾಗಿದರು.
13ನೇ ದಿನದ ಪಾದಯಾತ್ರೆ ಚಳ್ಳಕೆರೆ ನಗರದಲ್ಲಿ ಸಾಗಿ ಬೆಳಗ್ಗೆ 11 ಗಂಟೆಗೆ ತಾಲೂಕಿನ ಗಿರಿಯಮ್ಮನ ಹಳ್ಳಿ ತಲುಪಲಿದೆ. ಅಲ್ಲೇ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಗಿರಿಯಮ್ಮನಹಳ್ಳಿಯಲ್ಲಿ ಪುನಾರಂಭಗೊಳ್ಳುವ ಪಾದಯಾತ್ರೆ ಹಿರೇಗಳ್ಳಿ ಸಮೀಪದ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯ ಟೋಲ್ ಬಳಿ ಅಂತ್ಯವಾಗಲಿದ್ದು, ಅಲ್ಲೇ ರಾತ್ರಿ ತಂಗಲಿದೆ.












Click it and Unblock the Notifications