Breaking: ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ, ಚಿಕ್ಕಮಗಳೂರಲ್ಲಿ ಯೋಗ ಗುರು ಬಂಧನ
ಚಿಕ್ಕಮಗಳೂರು, ಸೆಪ್ಟೆಂಬರ್ 02: ಚಿಕ್ಕಮಗಳೂರು ಮೂಲದ ಯೋಗ ಗುರು ವಿರುದ್ಧ ಕ್ಯಾಲಿಪೋರ್ನಿಯಾದ ಮಹಿಳೆ ಅತ್ಯಾಚಾರದ ಆರೋಪ ಮಾಡಿದ್ದಾರೆ. ಯೋಗ ತರಬೇತಿಗೆಂದು ಬಂದಿದ್ದ ಮಹಿಳೆಯಿಂದ 20 ಲಕ್ಷ ಹಣವನ್ನು ಯೋಗ ಗುರು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ದೂರಿನ ಹಿನ್ನಲೆಯಲ್ಲಿ ಪೊಲೀಸರು ಯೋಗ ಗುರು ಪ್ರದೀಪ್ ಉಲ್ಲಾಳ್ (53) ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಯೋಗ ಶಾಲೆ ನಡೆಸುತ್ತಿದ್ದ ಪ್ರದೀಪ್ ಉಲ್ಲಾಳ್ ವಿರುದ್ಧ ಕ್ಯಾಲಿಪೋರ್ನಿಯಾದ ಮಹಿಳೆ ಆರೋಪವನ್ನು ಮಾಡಿದ್ದಾರೆ. ಯೋಗ ಶಾಲೆಯ ಗೂಗಲ್ ರಿವ್ಯೂನಲ್ಲಿಯೂ ಮಹಿಳೆ ಈ ಸ್ಥಳ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಬರೆದಿದ್ದಾರೆ.

ಅತ್ಯಾಚಾರದ ಆರೋಪದ ಹಿನ್ನಲೆಯಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಯೋಗ ಗುರು ಪ್ರದೀಪ್ ಉಲ್ಲಾಳ್ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಮಹಿಳೆ 4 ವರ್ಷದಿಂದಲೂ ಶಾಲೆಯಲ್ಲಿದ್ದರು ಎಂಬ ಮಾಹಿತಿ ಸಿಕ್ಕಿದೆ.
ಯೋಗ ಗುರು ಬೇರೆ ಮಹಿಳೆಯರ ಜೊತೆಯೂ ಸಂಬಂಧ ಹೊಂದಿರುವುದು ತಿಳಿದು ವಿದೇಶಿ ಮಹಿಳೆ ಜಗಳವಾಡಿದ್ದಾಳೆ. ಅಲ್ಲದೇ ಆಕೆಯಿಂದ ಯೋಗ ಗುರು 20 ಲಕ್ಷ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಮಹಿಳೆ ನೀಡಿದ ದೂರಿನ ಹಿನ್ನಲೆಯಲ್ಲಿ ಯೋಗ ಗುರು ಬಂಧಿಸಲಾಗಿದೆ.
ವಿದ್ಯಾರ್ಥಿನಿ ಮೇಲೆ ಉಪನ್ಯಾಕನಿಂದ ಅತ್ಯಾಚಾರ: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮದುವೆಯಾಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಉಪನ್ಯಾಸಕ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಉಪನ್ಯಾಸಕನನ್ನು ಬಂಧಿಸಲಾಗಿದೆ.
ಸಾಗರ ಪಟ್ಟಣದ ಖಾಸಗಿ ಕಾಲೇಜಿನ ಉಪನ್ಯಾಸಕ ಪುನೀತ್ ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಅರ್ಥವಾಗದ ವಿಷಯದ ಬಗ್ಗೆ ಅರ್ಥ ಮಾಡಿಸಿಕೊಡ್ತೇನೆ ಎಂದು ವಿದ್ಯಾರ್ಥಿನಿ ಜೊತೆ ಸ್ನೇಹ ಬೆಳೆಸಿದ್ದ ಪುನೀತ್, ನಂತರ ಮದುವೆಯಾಗುವುದಾಗಿ ನಂಬಿಸಿದ್ದ.
ಉಪನ್ಯಾಸಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಕುರಿತು ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಉಪನ್ಯಾಸಕ ಪುನೀತ್ ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ಕೈಗೊಂಡಿದ್ದಾರೆ.












Click it and Unblock the Notifications