ಎತ್ತಿನಹೊಳೆ: ಚಿಕ್ಕಬಳ್ಳಾಪುರ ಮಂದಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಕಾದಿದ್ದಾರೆ. ಈ ಬಗ್ಗೆ ಸಿಹಿ ಸುದ್ದಿ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಎತ್ತಿನಹೊಳೆ ಯೋಜನೆಯಲ್ಲಿ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ. ಎತ್ತಿನಹೊಳೆಯ 24 ಟಿಎಂಸಿಯಲ್ಲಿ 18 ಟಿಎಂಸಿ ನೀರು ಬರಲಿದೆ. ಇದರಲ್ಲಿ 16 ಟಿಎಂಸಿಯನ್ನು ಕುಡಿಯಲು ಕುಡಿಯುವ ಉದ್ದೇಶಕ್ಕೆ ಬಳಸಬೇಕು ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಎತ್ತಿನಹೊಳೆ ಯೋಜನೆ ಶುರುವಾಗಿದ್ದೇ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರು ಹರಿಸುವ ಕಾರಣಕ್ಕೆ. ಆದರೆ ಸದ್ಯ ತುಮಕೂರು ಜಿಲ್ಲೆಯ ತಾಲ್ಲೂಕುಗಳ ಕೆರೆಗಳನ್ನು ತುಂಬಿಸಲಾಗುತ್ತಿದೆ. ಮೊದಲು ನಮ್ಮ ಭಾಗಕ್ಕೆ ನೀರು ಹರಿಸಬೇಕು ಎಂದು ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು ತಿಪಟೂರು, ಕೊರಟಗೆರೆ, ಚಿಕ್ಕನಾಯಕನಹಳ್ಳಿ ಮತ್ತು ಮಧುಗಿರಿ ತಾಲೂಕುಗಳ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದಿದ್ದಾರೆ.

ಎತ್ತಿನಹೊಳೆಯ 24 ಟಿಎಂಸಿಯಲ್ಲಿ 16 ಟಿಎಂಸಿಯನ್ನು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬೇಕು. ಕೆಲವು ಭಾಗದಲ್ಲಿ ಅರಣ್ಯ ಇಲಾಖೆಯವರು ಕೆಲಸ ಮಾಡಲು ಬಿಟ್ಟರೆ ಈ ಯೋಜನೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ. ತಿಪಟೂರು, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಮಧುಗಿರಿ ತಾಲೂಕುಗಳ ಕೆರೆಗಳಿಗೆ ಈಗ ನೀರು ತುಂಬಿಸಲಾಗುತ್ತದೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ಕೊಡುವುದಿಲ್ಲ ಎಂಬ ಆತಂಕ ಆ ಭಾಗದ ಜನರಿಗೆ ಇದೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಹರಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬಾಗೇಪಲ್ಲಿ ಕ್ರೀಡಾಂಗಣಕ್ಕೆ 3 ಕೋಟಿ: ಬಾಗೇಪಲ್ಲಿ ತಾಲ್ಲೂಕಿನ ಕ್ರೀಡಾಂಗಣದ ಸೌಲಭ್ಯಗಳ ಉನ್ನತೀಕರಣಕ್ಕಾಗಿ 2024-25ನೇ ಸಾಲಿನಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಬಾಗೇಪಲ್ಲಿ ಶಾಸಕರಾದ ಸುಬ್ಬಾರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದರು. ಬಾಗೇಪಲ್ಲಿ ತಾಲ್ಲೂಕು ಕ್ರೀಡಾಂಗಣದ ಸೌಲಭ್ಯಗಳ ಉನ್ನತೀಕರಣಕ್ಕಾಗಿ ಈಗಾಗಲೇ ಇರುವ ಸೌಲಭ್ಯಗಳ ಜೊತೆಗೆ ಬೋರ್‌ವೆಲ್ ಕೊರೆದು, ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವುದು, ಕಾಂಪೌಂಡ್ ಗೋಡೆ ನಿರ್ಮಾಣ, ಮಳೆ ನೀರು ಚರಂಡಿ ನಿರ್ಮಾಣ, ಹಾಗೂ ಗುಡಿಬಂಡೆ ತಾಲ್ಲೂಕಿನ ಅಮಾನಿಬೈರ ಸಾಗರ ಗ್ರಾಮದಲ್ಲಿ 6 ಎಕರೆ ನಿವೇಶನ ಗುರುತಿಸಲಾಗಿದೆ. ತಾಲ್ಲೂಕು ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡಲಾಗಿದ್ದು, ಇದನ್ನು ಇಲಾಖೆಯ ವಶಕ್ಕೆ ಪಡೆಯಲಾಗಿದೆ ಎಂದು ಉತ್ತರಿಸಿದ್ದಾರೆ.
ಬೆಂಗಳೂರಿನಿಂದ 400 ಎಂಎಲ್‌ಡಿ ನೀರನ್ನು ಕೆ.ಸಿ.ವ್ಯಾಲಿ ಎರಡನೇ ಹಂತದಲ್ಲಿ ಹರಿಸಬೇಕೆಂಬ ಒಪ್ಪಂದವಾಗಿತ್ತು. ಮೊದಲ ಹಂತದಲ್ಲೂ ಸರಿಯಾಗಿ ನೀರು ಹರಿಸಲಾಗಿದೆ. ಹಾಗಾಗಿ ಬರಗಾಲವೂ ಕಡಿಮೆಯಾಗಿದೆ. ಈಗ ಕೋಲಾರ ಜಿಲ್ಲೆಯ ಬಂಗಾರಪೇಟೆ ಕ್ಷೇತ್ರಕ್ಕೆ ನೀರೇ ತಲುಪುತ್ತಿಲ್ಲ. ಕೆಸಿ ವ್ಯಾಲಿ ಯೋಜನೆಯ ಉದ್ದೇಶವೇ ಈಡೇರಿಲ್ಲ ಎಂದು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಪ್ರಶ್ನೆ ಮುಂದಿಟ್ಟರು.











Click it and Unblock the Notifications