Chinese Garlic: ದೇಸಿ ಬೆಳ್ಳುಳ್ಳಿ ದುಬಾರಿ- ನಿಷೇಧಿತ ಚೀನಾ ಬೆಳ್ಳುಳ್ಳಿ ಚಿಕ್ಕಬಳ್ಳಾಪುರದಲ್ಲಿ ಮಾರಾಟ!
ಚಿಕ್ಕಬಳ್ಳಾಪುರ ನವೆಂಬರ್ 29: ಭಾರತದ ಮಾರುಕಟ್ಟೆ ಮೇಲೆ ಒಂದಲ್ಲ ಒಂದು ಬಗೆಯಲ್ಲಿ ಹಿಡಿತ ಸಾಧಿಸಿಕೊಳ್ಳುವ ಪ್ರಯತ್ನದಲ್ಲಿರುವ ಚೀನ ಈಗ ಅಕ್ರಮವಾಗಿ ಬೆಳ್ಳುಳ್ಳಿಯನ್ನೂ ಭಾರತಕ್ಕೆ ರವಾನಿಸುತ್ತಿದೆಯಾ ಎಂಬ ಅನುಮಾನವು ಸಾರ್ವಜನಿಕ ವಲಯದಲ್ಲಿ ಮೂಡಿದೆ. ಈ ಅನುಮಾನಕ್ಕೆ ಕಾರಣವಾಗುತ್ತಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾರಾಟವಾಗುತ್ತಿರುವ ಟೆಮೊಟೊ ಗಾತ್ರದ ಬೆಳ್ಳುಳ್ಳಿ.
ಭಾರತೀಯರ ಬಹುತೇಕ ದಿನನಿತ್ಯ ಆಹಾರಗಳಲ್ಲಿ ಬಳಕೆಯಾಗುವ ಬೆಳ್ಳುಳ್ಳಿ ಆರೋಗ್ಯಕರ ಗುಣಗಳನ್ನು ಹೊಂದಿದ್ದು ಆಹಾರದ ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಕೆಲ ದಿನಗಳ ಹಿಂದೆ ರಾಸಾಯನಿಕಯುಕ್ತ ನಿಷೇಧಿತ ಚೀನಿ ಬೆಳ್ಳುಳ್ಳಿ ದೇಶ ಹಾಗೂ ರಾಜ್ಯದ ಮಾರುಕಟ್ಟೆಗಳ ಜೊತೆ ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆಗೂ ಪ್ರವೇಶ ಮಾಡಿದ ಅನುಮಾನ ಮೂಡಿದೆ.

ಹೌದು ದೇಶಿಯ ಮಾರುಕಟ್ಟೆಯಲ್ಲಿ ದೇಸಿ ಬೆಳ್ಳುಳ್ಳಿ ಬೆಲೆ ಗಗನಕ್ಕೆ ಏರಿದ ಹಿನ್ನಲೆಯಲ್ಲಿ ಅಗ್ಗಕ್ಕೆ ಸಿಗುವ ಚೀನಿ ಬೆಳ್ಳುಳ್ಳಿಯನ್ನು ಸ್ಥಳೀಯ ವ್ಯಾಪಾರಿಗಳು ಹಾಗೂ ತರಕಾರಿ ಮಾರಾಟಗಾರರು ಅಗ್ಗದ ಬೆಲೆಗೆ ಸಿಗುವ ಚೀನಿ ಬೆಳ್ಳುಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ. ಚೀನಾದಲ್ಲಿ ಬೆಳ್ಳುಳ್ಳಿಗೆ ಹೆಚ್ಚು ರಾಸಾಯನಿಕ ಉಪಯೋಗಿಸಲಾಗುತ್ತದೆ. ಹೀಗಾಗಿ ಆರೋಗ್ಯಕ್ಕೆ ಹಾನಿಕಾರಕವಾಗಿರುವ ಈ ಚೈನೀಸ್ ಬೆಳ್ಳುಳ್ಳಿಯನ್ನು ಹತ್ತು ವರ್ಷಗಳ ಹಿಂದೆಯೇ ಭಾರತದಲ್ಲಿ ನಿಷೇಧಿಸಲಾಗಿದ್ದರೂ ಸಹ ಕಳ್ಳ ಹಾದಿಯಲ್ಲಿ ಚೀನಿ ಬೆಳ್ಳುಳ್ಳಿ ಮಾರಾಟ ಮಾಡಲಾಗುತ್ತಿರುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ಜೀವಕ್ಕೆ ಮಾರಕವಾಗುವಂತಹ ರಾಸಾಯನಿಕ ಅಂಶಗಳು ಪತ್ತೆಯಾದ ಕಾರಣದಿಂದ ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ಬೆಳ್ಳುಳ್ಳಿ ಮೇಲೆ ನಿಷೇಧ ಹೇರಲಾಗಿದೆ. ಆದರೂ ಕಳ್ಳ ಮಾರ್ಗದಲ್ಲಿ ದೇಶದೊಳಗೆ ಪ್ರವೇಶಿಸಿರುವ ಚೀನಾ ಬೆಳ್ಳುಳ್ಳಿ ರಾಜ್ಯ ಹಾಗೂ ಜಿಲ್ಲೆಯ ಒಳಗೆ ಚೀನೀ ಬೆಳ್ಳುಳ್ಳಿ ಬರುತ್ತಿದ್ದು, ಅವುಗಳನ್ನು ಸಾವಯವ ಬೆಳ್ಳುಳ್ಳಿಗಳ ಜತೆ ಸೇರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಅನುಮಾನವು ಕಾಡ ತೊಡಗಿದೆ.

ದಿನನಿತ್ಯ ಅಡುಗೆ ಮನೆಯಲ್ಲಿ ಮಸಾಲೆ ಭರಿತ ತಿಂಡಿ ಊಟ ತಯಾರಿಸಲು ಬೆಳ್ಳುಳ್ಳಿ ಫೇವರಿಟ್, ಇನ್ನು ನಾನ್ ವೆಜ್ ಪ್ರೀಯಾರಿಗಂತೂ ಬೆಳ್ಳುಳ್ಳಿ ಬೇಕೇ ಬೇಕೇ . ದಿನೇ ದಿನೇ ಬೆಳ್ಳುಳ್ಳಿ ರೇಟ್ ದುಬಾರಿಯಾಗುತ್ತಿದೆ. ಇದ್ರಿಂದ ಮಾರುಕಟ್ಟೆಗೆ ಭಾರತ ಬ್ಯಾನ್ ಮಾಡಿರೋ ಚೀನಾ ಬೆಳ್ಳುಳ್ಳಿ ಎಂಟ್ರಿಯಾಗಿರೋ ಅನುಮಾನ ಮೂಡಿದ್ದು ಅಧಿಕಾರಿಗಳು ಅಲರ್ಟ್ ಆಗಿದ್ದು, ಅದು ಚೀನಾ ಬೆಳ್ಳುಳ್ಳಿಯೇ ಅಲ್ಲವೇ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ.
ಬೆಳ್ಳುಳ್ಳಿ ದರ ಎಷ್ಟು?
ಸದ್ಯ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 400 ರಿಂದ 500 ರೂ. ಇದೆ. ದಿನೇ ದಿನೇ ಬೆಳ್ಳುಳ್ಳಿ ರೇಟ್ ಗಗನಕ್ಕೆ ಏರುತ್ತಿದೆ. ಹಾಗಾಗಿ ಈಗ ಚಿಕ್ಕಬಳ್ಳಾಪುರದ ಮಾರುಕಟ್ಟೆಗಳಲ್ಲಿ ಎಲ್ಲಿ ನೋಡಿದ್ರೂ ಈಗ ಟೊಮೊಟೊ ಗಾತ್ರದಷ್ಟು ದಪ್ಪನಾಗಿ ಕಾಣುತ್ತಿರುವ ಬೆಳ್ಳುಳ್ಳಿ ಪ್ರತ್ಯಕ್ಷವಾಗಿದ್ದು ಇದು ಚೀನಾ ಬೆಳ್ಳುಳ್ಳಿ ನಾ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.
ವಾಸನೆಯೂ ಇಲ್ಲ ರುಚಿ ಇಲ್ಲ -
ಸ್ಥಳೀಯವಾಗಿ ಬೆಳೆಯುವ ದೇಸಿ ಬೆಳ್ಳುಳ್ಳಿ ರುಚಿಯಾಗಿರುತ್ತದೆ. ವಾಸನೆಯಲ್ಲಿ ಬಹಳಷ್ಟು ಘಾಟು ಇರುತ್ತದೆ. ಬಿಳಿ ಬಣ್ಣದಿಂದ ಕೂಡಿದ್ರೂ ಬೆಳ್ಳುಳ್ಳಿ ಎಸಳುಗಳು ಕಾರ್ನರ್‌ಗಳಲ್ಲಿ ಗುಲಾಬಿ ಕೆಂಬಣ್ಣದಿಂದ ಕೂಡಿರಲಿದೆ. ಆದರೆ ಈ ದಪ್ಪನೆಯ ಬೆಳ್ಳುಳ್ಳಿ ಶುಭ್ರ ಬಿಳಿ ಬಣ್ಣದಿಂದ ಕೂಡಿದ್ದು, ವಾಸನೆಯೂ ಇರುವುದಿಲ್ಲ, ರುಚಿಯೂ ಇರುವುದಿಲ್ಲ, ದೇಸಿ ಬೆಳ್ಳುಳ್ಳಿಯಂತೆ ಘಾಟು ಸಹ ಇಲ್ಲ. ಇದರಿಂದ ದಪ್ಪನೆಯ ಈ ಬೆಳ್ಳುಳ್ಳಿ ಚೀನಾ ಬೆಳ್ಳುಳ್ಳಿ ಅನ್ನೋ ಅನುಮಾನ ಎಲ್ಲರನ್ನು ಕಾಡತೊಡಗಿದೆ. ಹಾಗಾಗಿ ಅಧಿಕಾರಿಗಳು ಸಹ ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದೇಸಿ ಬೆಳ್ಳುಳ್ಳಿಗಿಂತ ಚೀನಿ ಬೆಳ್ಳುಳ್ಳಿ ಹೇಗೆ ಭಿನ್ನ?
ಚೀನಿ ಬೆಳ್ಳುಳ್ಳಿಯು ಪ್ರಕಾಶಮಾನವಾದ ಬಿಳಿ ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಆದರೆ ದೇಸಿ ಬೆಳ್ಳುಳ್ಳಿಯ ಪದರವು ಅನೇಕ ಚುಕ್ಕೆಗಳನ್ನು ಹೊಂದಿವೆ. ಅದರ ಸಿಪ್ಪೆಯು ಬಿಳಿಯಿಂದ ಗುಲಾಬಿ ಅಥವಾ ತಿಳಿ ಕಂದು ಬಣ್ಣದ್ದಲ್ಲಿರುತ್ತದೆ. ದೇಸಿ ಹಾಗೂ ಚೀನಿ ಬೆಳ್ಳುಳ್ಳಿಯ ಭೌತಿಕ ರಚನೆಯಿಂದ ಇದರ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು.












Click it and Unblock the Notifications