'ಮೋದಿ ಏನೂ ವಾಜಪೇಯಿ ಅಲ್ಲ, ಬಿಜೆಪಿ ಜತೆ ಮೈತ್ರಿ ಸಾಧ್ಯವಿಲ್ಲ'
ಚೆನ್ನೈ, ಜನವರಿ 11: ಡಿಎಂಕೆ ಎಂದಿಗೂ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ವಾಜಪೇಯಿ ಅಲ್ಲ. ಅವರ ಅಡಿಯಲ್ಲಿ ಮೈತ್ರಿ ಆರೋಗ್ಯಕರವಲ್ಲ. ವಿಪರ್ಯಾಸ ಏನೆಂದರೆ ಮೋದಿ ತಮ್ಮನ್ನು ವಾಜಪೇಯಿ ಅವರ ಜತೆಗೆ ಹೋಲಿಕೆ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖ್ಯಸ್ಥ ಎಂ.ಕೆ.ಸ್ಟಾಲಿನ್.
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಜತೆಗಿನ ಮೈತ್ರಿ ಸಾಧ್ಯತೆ ಬಗ್ಗೆ ಮಾತನಾಡಿದ ಅವರು, ವಾಜಪೇಯಿ ಅವರು ವಿಭಜನೆ ರಾಜಕೀಯದ ಪ್ರಸ್ತಾವ ಅಥವಾ ಪರ ನಿಂತವರಲ್ಲ. ಆದ್ದರಿಂದ ಅವರಿಗೆ ಈ ಹಿಂದೆ ವಾಜಪೇಯಿ ಅವರಿಗೆ ಡಿಎಂಕೆ ಬೆಂಬಲ ನೀಡಿತ್ತು ಎಂದು ಅವರು ಹೇಳಿದ್ದಾರೆ.
ತಮಿಳುನಾಡಿನ ಕೇಸರಿ ಪಕ್ಷದ ಕಾರ್ಯಕರ್ತರ ಜತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿ, ಎಲ್ಲ ಪಕ್ಷಗಳಿಗೆ ಮೈತ್ರಿಗೆ ಬಿಜೆಪಿ ಮುಕ್ತವಾಗಿ ಬಾಗಿಲು ತೆರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಮರುದಿನವೇ ಸ್ಟಾಲಿನ್ ರಿಂದ ಈ ಹೇಳಿಕೆ ಬಂದಿದೆ.

ಯಶಸ್ವಿ ಮೈತ್ರಿ ಸರಕಾರ ರಚಿಸಿದ್ದ ವಾಜಪೇಯಿ ಅವರ ಬಗ್ಗೆ ಮಾತನಾಡಿದ್ದ ಪ್ರಧಾನಿ, ಅದು ಭಾರತದ ರಾಜಕಾರಣಕ್ಕೆ 'ಹೊಸ ಸಂಸ್ಕೃತಿ'ಯಾಗಿತ್ತು. ಬಿಜೆಪಿಯು ವಾಜಪೇಯಿ ಅವರು ತೋರಿದ ಹಾದಿಯಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ತಮಿಳುನಾಡಿನಲ್ಲಿ ಆರು ಸಣ್ಣ ಪಕ್ಷಗಳ ಜತೆಗೂಡಿ ಮೈತ್ರಿ ಮಾಡಿಕೊಂಡಿತ್ತು. 39 ಲೋಕಸಭಾ ಕ್ಷೇತ್ರ ಇರುವ ತಮಿಳುನಾಡಿನಲ್ಲಿ ಆ ಮೈತ್ರಿ ಕೂಟಕ್ಕೆ 2 ಸ್ಥಾನಗಳನ್ನು ಮಾತ್ರ ಜಯಿಸಲು ಸಾಧ್ಯವಾಗಿತ್ತು.
ಮುಂಬರುವ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಎಂ.ಕೆ.ಸ್ಟಾಲಿನ್ ಪ್ರಸ್ತಾವ ಮಾಡಿದ್ದರು. 'ಫ್ಯಾಸಿಸ್ಟ್' ಮೋದಿಯನ್ನು ಕಿತ್ತೊಗೆಯುವ ಸಾಮರ್ಥ್ಯ ರಾಹುಲ್ ಗಾಂಧಿ ಅವರಿಗೆ ಇದೆ ಎಂದಿದ್ದರು.












Click it and Unblock the Notifications