ತಮಿಳುನಾಡಿನಲ್ಲಿ ಡಿಎಂಕೆ- ಕಾಂಗ್ರೆಸ್ ಮೈತ್ರಿ ಘೋಷಣೆ
ಚೆನ್ನೈ, ಫೆಬ್ರವರಿ 20: ಮುಂಬರುವ ಲೋಕಸಭೆ ಚುನಾವಣೆಗೆ ಎಐಎಡಿಎಂಕೆ ಹಾಗೂ ಬಿಜೆಪಿ ಮಧ್ಯೆ ಮೈತ್ರಿಯು ತಮಿಳುನಾಡಿನಲ್ಲಿ ಅಂತಿಮಗೊಂಡ ಮರು ದಿನ ಬುಧವಾರದಂದು ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿ ಒಪ್ಪಂದಕ್ಕೆ ಬಂದಿವೆ. ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ.
ಒಟ್ಟು 40 ಲೋಕಸಭಾ ಕ್ಷೇತ್ರಗಳ ಪೈಕಿ ತಮಿಳುನಾಡಿನಲ್ಲಿ 39 ಹಾಗೂ ಪುದುಚೆರಿಯಲ್ಲಿ 1 ಸ್ಥಾನವಿದೆ. ಅದರಲ್ಲಿ ಡಿಎಂಕೆ 25ರಿಂದ 28 ಸ್ಥಾನಗಳಲ್ಲಿ ಸ್ಪರ್ಧಿಸುವ ಭರವಸೆ ಇದೆ. ಕಾಂಗ್ರೆಸ್ 16 ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ಆಶಯ ವ್ಯಕ್ತಪಡಿಸಿದೆ.
ಡಿಎಂಕೆ ರಾಜ್ಯಸಭಾ ಸದಸ್ಯೆ ಹಾಗೂ ಡಿಎಂಕೆ ಮಹಿಳಾ ವಿಭಾಗದ ಕಾರ್ಯದರ್ಶಿ ಕನಿಮೊಳಿ, ಡಿಎಂಕೆಯ ಮತ್ತೊಬ್ಬ ಪ್ರಮುಖ ನಾಯಕ ಟಿ.ಆರ್.ಬಾಲು ಅವರು ಡಿಎಂಕೆ ಪರವಾಗಿ ಹಾಗೂ ಕಾಂಗ್ರೆಸ್ ಪರವಾಗಿ ಕೆ.ಎಸ್.ಅಳಗಿರಿ ಹಾಗೂ ಮಾಅಜಿ ಸಚಿವರಾದ ಇವಿಕೆಎಸ್ ಇಳಂಗೋವನ್ ಮತ್ತು ತಂಗಬಾಲು ಮಾತುಕತೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಹಾಗೂ ಕಾಂಗ್ರೆಸ್ ತಮಿಳುನಾಡಿನಲ್ಲಿ ಒಂದು ಸ್ಥಾನ ಗೆಲ್ಲಲು ಕೂಡ ಆಗಿರಲಿಲ್ಲ. ಸಿಪಿಐ, ಸಿಪಿಎಂ, ವೈಕೋರ ಎಂಡಿಎಂಕೆ, ವಿಡುದಲೈ ಚಿರುತೈಗಳ್ ಕಟ್ಚಿ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಮಾತುಕತೆ ನಡೆಸುತ್ತಿದೆ.
25ರಿಂದ 28 ಸ್ಥಾನಗಳಲ್ಲಿ ಡಿಎಂಕೆ ಸ್ಪರ್ಧೆ ಮಾಡಲಿದೆ. ಎಂಡಿಎಂಕೆ, ವಿಡುದಲೈ ಚಿರುತೈಗಳ್ ಕಟ್ಚಿಗಳಿಗೆ ಉದಯ ಸೂರ್ಯನ ಗುರುತಿನ ಅಡಿಯಲ್ಲಿ ಸ್ಪರ್ಧಿಸುವಂತೆ ಕೇಳಿಕೊಳ್ಳಲಿದೆ. ಎಡ ಪಕ್ಷಗಳು ಹಾಗೂ ಐಯುಎಂಎಲ್ ಅದರದೇ ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡಲಿವೆ ಎಂದು ಡಿಎಂಕೆ ಪದಾಧಿಕಾರಿಗಳು ಹೇಳಿದ್ದಾರೆ.












Click it and Unblock the Notifications