Just in: ತಮಿಳುನಾಡು: ಬಾಲಕನನ್ನು ಮದುವೆಯಾಗಿ ಗರ್ಭಿಣಿಯಾದ ಯುವತಿಯ ಬಂಧನ
ಚೆನ್ನೈ, ಅ.12: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ತನ್ನ ಅಪ್ರಾಪ್ತ ಸಹಪಾಠಿಯನ್ನು ಮದುವೆಯಾದ ಆರೋಪದ ಮೇಲೆ 20 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಕಾಲೇಜು ಯುವತಿ ಗರ್ಭಿಣಿಯಾಗಿದ್ದು, ಅಪ್ರಾಪ್ತನೊಂದಿಗೆ ವಾಸವಿದ್ದರು ಎಂದು ತಿಳಿದು ಬಂದಿದೆ.
ಏಪ್ರಿಲ್‌ನಲ್ಲಿ ಕಾಣೆಯಾಗಿದ್ದ ಅಪ್ರಾಪ್ತ ಬಾಲಕ ತನ್ನ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯೊಂದಿಗೆ ವಾಸಿಸುತ್ತಿರುವುದು ಕಂಡುಬಂದಿದೆ. ಆತನನ್ನು ಹುಡುಕಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೋಷಕರು ಅರ್ಜಿ ಸಲ್ಲಿಸಿದ ನಂತರ ಪೊಲೀಸರು ಆತನನ್ನು ಪತ್ತೆಹಚ್ಚಿದ್ದಾರೆ.
ಗರ್ಭಿಣಿ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

"ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ" ಎಂದು ಸೇಲಂ ನಗರದ ಪೊಲೀಸ್ ಕಮಿಷನರ್ ನಜ್ಮುಲ್ ಹೋಡಾ ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಕಡಲೂರು ಜಿಲ್ಲೆಯ ಬಸ್ ನಿಲ್ದಾಣದಲ್ಲಿ ಪಾಲಿಟೆಕ್ನಿಕ್‌ನಲ್ಲಿ ಓದುತ್ತಿರುವ 17 ವರ್ಷದ ಹುಡುಗ 16 ವರ್ಷದ ಹುಡುಗಿಯನ್ನು ಪ್ರಯಾಣಿಕರ ಸಮ್ಮುಖದಲ್ಲಿ ಮದುವೆಯಾಗಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಜಿಲ್ಲಾ ಪೊಲೀಸರು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತನಿಖೆ ಆರಂಭಿಸಿದೆ.
ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕಡಲೂರು ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ಬಾಲ್ಯವಿವಾಹ ನಿಷೇಧ ಕಾಯಿದೆ, 2006ರ ಪ್ರಕಾರ ಪುರುಷನಿಗೆ 21 ವರ್ಷ ಮತ್ತು ಮಹಿಳೆಗೆ 18 ವರ್ಷ ವಯಸ್ಸಾಗಿರಬೇಕು.
ಬಸ್ ನಿಲ್ದಾಣದಲ್ಲಿ ಬಾಲಕಿಗೆ ಮಂಗಳಸೂತ್ರ ಕಟ್ಟುವ ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದ್ದು, ಆತನನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾಲಕನನ್ನು ಅಬ್ಸರ್ವೇಶನ್ ಹೋಮ್‌ಗೆ ಕಳುಹಿಸಿದ್ದಾರೆ.
"ಬಂಧಿತ ಬಾಲಕ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾನೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ.
ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ಆರೋಪದ ಮೇಲೆ ಎಸ್ಸಿ/ಎಸ್ಟಿ ಕಾಯ್ದೆಯಡಿ ಪೊಲೀಸರು ಮತ್ತೊಬ್ಬ ಬಾಲಾಜಿ ಗಣೇಶ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಾಲಕ ಮತ್ತು ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದ ಕಾರಣ ಬಾಲಾಜಿ ವಿರುದ್ಧ ಬಾಲನ್ಯಾಯ ಕಾಯ್ದೆ, ಮಹಿಳಾ ಕಿರುಕುಳ ತಡೆ ಕಾಯ್ದೆ ಮತ್ತು ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇತ್ತ, ಬಾಲಕಿಗೆ ಮಕ್ಕಳ ಕಲ್ಯಾಣ ಸಮಿತಿಯ ಕಚೇರಿಯಲ್ಲಿ ಕೌನ್ಸೆಲಿಂಗ್ ನೀಡಲಾಗಿದ್ದು, ಬಾಲಕನನ್ನು ಕಡಲೂರಿನ ಬಾಲಾಪರಾಧಿ ವೀಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.












Click it and Unblock the Notifications